ವಾರಣಾಸಿ: ಜ್ಞಾನವಾಪಿ ಮಸೀದಿಯಲ್ಲಿ ಇದೆಯೆಂದು ಹೇಳಲಾಗಿರುವ ಶಿವಲಿಂಗದ ಜಾಗದಲ್ಲಿ ಕೈಕಾಲು ತೊಳೆಯುವುದರಿಂದ ಆ ಸ್ಥಳ ಅಪವಿತ್ರಗೊಳ್ಳುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಹಿರಿಯ ವಕೀಲ ಹರಿಶಂಕರ್ ಪಾಂಡೆ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ತೀರ್ಪನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ಇಂದು ಪ್ರಕಟಿಸಲಿದೆ.
ಹಾಗೆ ಮಾಡುವುದು ಹಿಂದೂ ಸಮಾಜಕ್ಕೆ ಅವಮಾನ ಮಾಡಿದಂತೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಜ್ಞಾನವಾಪಿ ಮಸೀದಿ ವಿವಾದದ ಕುರಿತು ತಮ್ಮ ಹೇಳಿಕೆಗಳ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಇತರ ರಾಜಕೀಯ ನಾಯಕರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಮಸೀದಿಯ ವಜು ಖಾನಾದಲ್ಲಿ ಕೈಕಾಲು ತೊಳೆಯುವುದನ್ನು ಮತ್ತು ರಾಜಕೀಯ ನಾಯಕರ ಹೇಳಿಕೆಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಮೇಲಿನ ಆದೇಶವನ್ನು ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಉಜ್ವಲ್ ಉಪಾಧ್ಯಾಯ ಅವರ ನ್ಯಾಯಾಲಯ ಶನಿವಾರ ಕಾಯ್ದಿರಿಸಿದೆ. ನ್ಯಾಯಾಲಯ ತನ್ನ ಹಿಂದಿನ ವಿಚಾರಣೆಯಲ್ಲಿ ಆದೇಶ ಕಾಯ್ದಿರಿಸಿದೆ ಮತ್ತು ಈ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆಗಾಗಿ ಅಕ್ಟೋಬರ್ 17 ನ್ನು ನಿಗದಿಪಡಿಸಿದೆ.
ಈ ಹಿಂದೆ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ, ಮಸೀದಿ ಸಂಕೀರ್ಣದ ಸಮೀಕ್ಷೆಯ ವೇಳೆ ಕಂಡುಬಂದ 'ಶಿವಲಿಂಗ'ದ ಕಾರ್ಬನ್ ಡೇಟಿಂಗ್ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣ: ಶಿವಲಿಂಗದ ಕಾರ್ಬನ್ ಡೇಟಿಂಗ್ಗೆ ಅನುಮತಿ ನಿರಾಕರಿಸಿದ ಕೋರ್ಟ್