ವಾರಾಣಸಿ(ಉತ್ತರ ಪ್ರದೇಶ): ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿರುವ 'ಶಿವಲಿಂಗ'ದ ವೈಜ್ಞಾನಿಕ ತನಿಖೆ ನಡೆಸದಂತೆ ವಾರಾಣಸಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ ಅರ್ಜಿದಾರರು ಸಲ್ಲಿಸಿದ ಮನವಿಯನ್ನು ವಾರಾಣಸಿ ನ್ಯಾಯಾಲಯ ತಿರಸ್ಕರಿಸಿದೆ.
ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ 'ಶಿವಲಿಂಗ'ದ ವಯಸ್ಸನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಬೇಕು ಎಂದು ಹಿಂದೂ ಅರ್ಜಿದಾರರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಕಾರ್ಬನ್ ಡೇಟಿಂಗ್ ನಂತಹ ಸಮೀಕ್ಷೆಯು ಮಸೀದಿಯೊಳಗಿನ ಸ್ಥಳವನ್ನು ಮುಚ್ಚುವ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಅಂಜುಮನ್ ಮಸೀದಿ ಸಮಿತಿಯು ಈ ರಚನೆಯನ್ನು 'ಫೌವಾರಾ/ಫೌಂಟೇನ್' ಎಂದು ಕರೆದಿದೆ. ಅಂಜುಮನ್ ಇಂತೇಜಾಮಿಯಾ ಸಮಿತಿಯ ವಾದವನ್ನು ಆಲಿಸಿದ, ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಹಿಂದೂ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದ ನ್ಯಾ.ರವಿಕುಮಾರ್ ದಿವಾಕರ್ ವರ್ಗಾವಣೆ
ವಿಡಿಯೋಗ್ರಫಿ ಸಮೀಕ್ಷೆಯ ಬಳಿಕ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಐದು ಹಿಂದೂ ಅರ್ಜಿದಾರರು ಮಸೀದಿಯೊಳಗಿನ ರಚನೆಯ ಕಾರ್ಬನ್ ಡೇಟಿಂಗ್ ಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಮುಸ್ಲಿಮರು ನಮಾಜ್‌ಗೂ ಮುನ್ನ ಬಳಸುತ್ತಿದ್ದ 'ವಝೂಖಾನ' ಕೊಳದ ಸಮೀಪ ಶಿವಲಿಂಗದ ಆಕೃತಿ ಪತ್ತೆಯಾಗಿತ್ತು. ಆ ಆಕೃತಿಯನ್ನು ಕಾರ್ಬನ್ ಡೇಟಿಂಗ್‌ಗೆ ಒಳಪಡಿಸಬೇಕು. ಈ ಮೂಲಕ ಅಲ್ಲಿ ಪತ್ತೆಯಾಗಿದ್ದು ಕಾರಂಜಿಯೋ, ಶಿವಲಿಂಗವೋ ಎಂಬುವುದನ್ನು ದೃಢಪಡಿಸಬೇಕು ಎಂದು ಜ್ಞಾನವಾಪಿ, ಶೃಂಗಾರ ಗೌರಿ ಮೊಕದ್ದಮೆಯ ಹಿಂದೂ ಪರ ಅರ್ಜಿದಾರರು ಮನವಿ ಮಾಡಿದ್ದರು.