ಅಹಮದಾಬಾದ್(ಗುಜರಾತ್): ಗುಜರಾತ್‌ನಲ್ಲಿ ಪಟೇಲ್ ಚಳವಳಿಯ ಮೂಲಕ ಗುರುತಿಸಿಕೊಂಡಿದ್ದ ಹಾರ್ದಿಕ್ ಪಟೇಲ್ ಭಾರಿ ನಿರೀಕ್ಷೆಯೊಂದಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ, ಕಾರ್ಯಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಇದೀಗ ಪಕ್ಷವೇ ತನ್ನನ್ನು ಮೂಲೆಗುಂಪು ಮಾಡುತ್ತಿದೆ ಎಂದು ಕಾರ್ಯಕರ್ತರ ಸಭೆಯಲ್ಲಿ ಸಾರ್ವಜನಿಕವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನನ್ನು ರಾಜ್ಯ ಕಾಂಗ್ರೆಸ್ನ ಹಿರಿಯ ನಾಯಕರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಕ್ಷದ ಯಾವುದೇ ಸಭೆಗೆ ತಮ್ಮನ್ನು ಆಹ್ವಾನಿಸುವುದಿಲ್ಲ. ಯಾವುದೇ ನಿರ್ಧಾರಗಳ ಮೊದಲು ನನ್ನೊಂದಿಗೆ ಸಮಾಲೋಚಿಸುವುದಿಲ್ಲ. ನನ್ನ ಪರಿಸ್ಥಿತಿ ಹೇಗಾಗಿದೆಯೆಂದರೆ, ಹೊಸದಾಗಿ ಮದುವೆಯಾದಾಗ ಮದುಮಗಳೇ ನನಗೆ ಸಂತಾಹರಣ ಚಿಕಿತ್ಸೆ ಮಾಡಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಲ್ಲದೇ, ಪಾಟೀದಾರ್ ಸಮುದಾಯದ ಮತ್ತೊಬ್ಬ ನಾಯಕ ನರೇಶ್ ಪಟೇಲ್ ಅವರ ಸೇರ್ಪಡೆಯನ್ನು ಪಕ್ಷ ನಿಭಾಯಿಸುತ್ತಿರುವ ರೀತಿಗೂ ಅಸಮಾಧಾನ ವ್ಯಕ್ತಪಡಿಸಿರುವ ಹಾರ್ದಿಕ್ ಪಟೇಲ್, ನರೇಶ್ ಪಟೇಲ್ ಕಾಂಗ್ರೆಸ್ ಸೇರ್ಪಡೆ ಕುರಿತು ನಡೆಯುತ್ತಿರುವ ಚರ್ಚೆ ಇಡೀ ಸಮುದಾಯಕ್ಕೆ ಅವಮಾನಕರವಾಗಿದೆ. ಎರಡು ತಿಂಗಳೇ ಕಳೆದಿದೆ. ಇನ್ನೂ ಏಕೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ?. ಕಾಂಗ್ರೆಸ್ ಹೈಕಮಾಂಡ್ ಅಥವಾ ಸ್ಥಳೀಯ ನಾಯಕತ್ವ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಿಜೆಪಿಯೊಂದಿಗೆ ನೇರ ಹಣಾಹಣಿ ನಡೆಸುತ್ತಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಗುಜರಾತ್ ಕೂಡ ಒಂದಾಗಿದೆ. ಗುಜರಾತ್‌ನಲ್ಲಿ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಹಾರ್ದಿಕ್ ಪಟೇಲ್ರ ಈ ಹೇಳಿಕೆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸುತ್ತದೆ.
ಇದನ್ನೂ ಓದಿ: ಪಂಜಾಬ್ ಅಧಿಕಾರಿಗಳೊಂದಿಗೆ ಕೇಜ್ರಿವಾಲ್ ಸಭೆ: ಸಿಎಂ ಭಗವಂತ್ ಮಾನ್ ಸಮರ್ಥನೆ ಹೀಗಿದೆ..