ಗುಂಟೂರು (ಆಂಧ್ರಪ್ರದೇಶ): ಜೀನ್ಸ್ ಪ್ಯಾಂಟ್, ಟೀ-ಶರ್ಟ್ ಹಾಕಿಕೊಂಡು ರಸ್ತೆಗೆ ಬರುವ ಆ ಮಹಿಳೆಯರು ಹೇಳುತ್ತಿದ್ದ ಕಥೆಯೇ ಬೇರೆ. ನೋಡಲು ಅಂದವಾಗಿದ್ದರೂ ಅವರು ಮಾಡುತ್ತಿದ್ದು ಮಾತ್ರ ಸುಲಿಗೆ. ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರನ್ನು ತಡೆದು ಮಗುವಿಗೆ ಆರೋಗ್ಯ ಸರಿ ಇಲ್ಲ.. ಪ್ರಕೃತಿ ವಿಕೋಪಕ್ಕೆ ನಮ್ಮ ಮನೆ, ಗ್ರಾಮ ಹಾನಿಯಾಗಿದೆ.. ಎಂಬೆಲ್ಲ ನೆಪಗಳು ಹಣ ಪೀಕುತ್ತಿದ್ದರು. ಇಂತಹ ಖತರ್ನಾಕ್ ಗುಜರಾತಿ ಲೇಡಿ ಗ್ಯಾಂಗ್ನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಹೌದು, ಗುಂಟೂರು ಜಿಲ್ಲೆಯ ವಿವಿಧೆಡೆ ವಾಹನ ಚಾಲಕರಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದ ಗುಜರಾತಿ ಲೇಡಿ ಗ್ಯಾಂಗ್ನ್ನು ಪೊಲೀಸರು ಬಂಧಿಸಿದ್ದಾರೆ. ವಿವಿಧ ಕರಪತ್ರಗಳನ್ನು ತೋರಿಸಿ ಹಣ ವಸೂಲಿ ಮಾಡುತ್ತಿದ್ದ ಈ ಮಹಿಳೆಯರು ಹಣ ನೀಡದ ವಾಹನ ಸವಾರರಿಂದ ವಾಹನದ ಬೀಗ ಕಸಿದುಕೊಳ್ಳುತ್ತಿದ್ದರು.
ಆಗಲೂ ಹಣ ನೀಡದಿದ್ದಲ್ಲಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಕೇಸ್ ದಾಖಲಿಸುವ ಬ್ಲಾಕ್ ಮೇಲ್ ಮಾಡುತ್ತಿದ್ದರು. ಈ ಮಹಿಳೆಯರಿಂದ ಬೇಸತ್ತಿದ್ದ ವಾಹನ ಚಾಲಕ ಸಾಯಿತೇಜಾ ರೆಡ್ಡಿ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ 18 ಜನ ಮಹಿಳೆಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಂಡ - ತಂಡವಾಗಿ ನಿಲ್ಲುತ್ತಿದ್ದ ಲೇಡಿಸ್: ಗುಜರಾತ್‌ನಿಂದ ಬಂದ ಒಟ್ಟಾರೆ 32 ಮಹಿಳೆಯರು ಗುಂಟೂರಿನ ಲಾಡ್ಜ್‌ನಲ್ಲಿ ತಂಗಿದ್ದರು. ಬೇರೆ - ಬೇರೆ ಕಡೆಗಳಲ್ಲಿ ತಂಡ - ತಂಡವಾಗಿ ಲೇಡಿಸ್ ನಿಂತು ವಾಹನ ಸವಾರರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಹೀಗೆ ವಿವಿಧೆಡೆ ಕಾರ್ಯಾಚರಣೆ ನಡೆಸಿ ಪೆಡಕಾಕಣಿಯಲ್ಲಿ ಐವರು, ನಗರಪಾಲೆಂನಲ್ಲಿ ನಾಲ್ವರು ಮತ್ತು ತೆನಾಲಿಯಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ಬಂಡಾರು ಸುರೇಶ್ ಬಾಬು ತಿಳಿಸಿದ್ದಾರೆ.
ಈ ಲೇಡಿ ಗ್ಯಾಂಗ್ ಬೇರೆ ಉಪನಗರಗಳಲ್ಲೂ ಸುಲಿಗೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಉಳಿದವರ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಜೊತೆಗೆ ಈ ಸುಲಿಗೆ ಕಾರ್ಯಾದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ಧಾರೆ.
ಇದನ್ನೂ ಓದಿ: ರಸ್ತೆ ಬದಿ ಮಲಗಿದ್ದ 14 ಕಾರ್ಮಿಕರ ಮೇಲೆ ಹರಿದ 'ಯಮ ಸ್ವರೂಪಿ' ಲಾರಿ