ಅಹಮದಾಬಾದ್ (ಗುಜರಾತ್): ಏಪ್ರಿಲ್ 22 ರಂದು ನಗರದ ಮೂರು ಆಸ್ಪತ್ರೆಗಳಲ್ಲಿ ಅಲ್ಲಿನ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದ ಪರಿಣಾಮ, 30 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಮೃತ ಮಹಿಳೆ ಕೋವಿಡ್ ರೋಗಲಕ್ಷಣಗಳನ್ನು ಹೊಂದಿದ್ದು, ಪತಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಯಾವುದೇ ಆ್ಯಂಬುಲೆನ್ಸ್ ಸೇವೆಗೆ ದೊರೆಯಲೇ ಇಲ್ಲ. ಈ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ಗೆ ಕಾಯುವ ಬದಲು, ಪತಿ ತನ್ನ ಹೆಂಡತಿಯನ್ನು ಆಟೋರಿಕ್ಷಾದಲ್ಲಿ ಇರಿಸಿ ಮೂರು ಆಸ್ಪತ್ರೆಗಳಿಗೆ ಸುತ್ತಿದ್ದಾರೆ. ಆದರೆ, ಯಾವುದೇ ಐಸಿಯು ಹಾಸಿಗೆಗಳು ಲಭ್ಯವಿಲ್ಲದ ಕಾರಣ ಎಲ್ಲೆಡೆ ಪ್ರವೇಶ ನಿರಾಕರಿಸಲಾಗಿದೆ.
ಕೊನೆಗೆ, ಅವರು ಅಹಮದಾಬಾದ್‌ನ ಅಸರ್ವಾ ಸಿವಿಲ್‌ನ 1,200 ಹಾಸಿಗೆಗಳ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರು ಚಿಕಿತ್ಸೆಗಾಗಿ ಕಾಯುತ್ತಿದ್ದ ವೇಳೆಯೇ ಕೊನೆಯುಸಿರೆಳೆದರು. ಆದಾಗ್ಯೂ, ಆಸ್ಪತ್ರೆಯ ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.
ಜುನಾಗಢದಲ್ಲಿ ಕೊರೊನಾ ಪರೀಕ್ಷಾ ಪರಿಕರಗಳ ಅಭಾವ:
ಕೋವಿಡ್ ಪ್ರಕರಣಗಳನ್ನು ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆಯಿಂದ ಮಾತ್ರ ತಡೆಯಬಹುದು. ಅಂಥದ್ರಲ್ಲಿ ಜುನಾಗಢ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಬಹಿರಂಗಗೊಂಡ ಮಾಹಿತಿ ಆತಂಕ ಉಂಟು ಮಾಡಿದೆ.
ಆರೋಗ್ಯ ಇಲಾಖೆಯು ಪ್ರತಿದಿನ ಕೇವಲ 20 ಪರೀಕ್ಷಾ ಕಿಟ್‌ಗಳನ್ನು ರವಾನಿಸುವುದರಿಂದ ಇಲ್ಲಿ ಕೇವಲ 20 ಜನರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ. ಸರದಿಯಲ್ಲಿ ದೀರ್ಘಕಾಲ ಕಾಯುವ ಹಳ್ಳಿಯ ಹೆಚ್ಚಿನ ಸಂಖ್ಯೆಯ ಜನರು ಪರೀಕ್ಷೆಗೆ ಒಳಗಾಗದೆ ಹಿಂದಿರುಗುವುದು ಸಾಮಾನ್ಯ ಸಂಗತಿಯಾಗುತ್ತಿದೆ.