ಅಹಮದಾಬಾದ್: 2002ರ ಕೋಮುಗಲಭೆಗೆ ಸಂಬಂಧಿಸಿದಂತೆ ಅಮಾಯಕರನ್ನು ಸುಳ್ಳು ಸಾಕ್ಷ್ಯ ಸೃಷ್ಟಿಸಿ ಸಿಲುಕಿಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರ ವಿಶೇಷ ತನಿಖಾ ತಂಡವು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ವರ್ಗಾವಣೆ ವಾರಂಟ್ ಮೂಲಕ ಬಂಧಿಸಿದೆ.
"ನಾವು ಸಂಜೀವ್ ಭಟ್ ಅವರನ್ನು ವರ್ಗಾವಣೆ ವಾರಂಟ್ ಆಧಾರದ ಮೇಲೆ ಪಾಲನ್‌ಪುರ ಜೈಲಿನಿಂದ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಮಂಗಳವಾರ ಸಂಜೆ ಅವರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ" ಎಂದು ಅಹಮದಾಬಾದ್ ಕ್ರೈಂ ಬ್ರಾಂಚ್‌ನ ಉಪ ಪೊಲೀಸ್ ಆಯುಕ್ತ ಚೈತನ್ಯ ಮಾಂಡ್ಲಿಕ್ ಹೇಳಿದ್ದಾರೆ.
ಕಳೆದ ತಿಂಗಳು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಗುಜರಾತ್‌ನ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ.ಶ್ರೀಕುಮಾರ್ ಅವರನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಅವರು ಜೈಲಿನಲ್ಲಿದ್ದಾರೆ. 2002ರ ಗುಜರಾತ್ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ಭಟ್, ಶ್ರೀಕುಮಾರ್ ಮತ್ತು ಸೆಟಲ್ವಾಡ್ ಅವರ ಪಾತ್ರಗಳ ಕುರಿತು ತನಿಖೆ ನಡೆಸಲು ಕಳೆದ ತಿಂಗಳು ರಾಜ್ಯ ಸರ್ಕಾರ ಎಸ್‌ಐಟಿ ತಂಡ ರಚಿಸಿತ್ತು. ಈ ತಂಡದಲ್ಲಿ ಮಾಂಡ್ಲಿಕ್ ಕೂಡ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ತೀಸ್ತಾ ಸೆಟಲ್ವಾಟ್ರನ್ನು ವಶಕ್ಕೆ ಪಡೆದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ
ಸೆಟಲ್ವಾಡ್, ಶ್ರೀಕುಮಾರ್ ಮತ್ತು ಭಟ್ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 468, 471(ನಕಲಿ), 194 (ಮರಣದಂಡನೆಯ ಅಪರಾಧವನ್ನು ಪಡೆಯುವ ಉದ್ದೇಶದಿಂದ ಸುಳ್ಳು ಪುರಾವೆಗಳನ್ನು ನೀಡುವುದು ಅಥವಾ ನಿರ್ಮಿಸುವುದು), 211 (ಗಾಯ ಉಂಟುಮಾಡುವ ಕ್ರಿಮಿನಲ್ ಪ್ರಕ್ರಿಯೆಗಳನ್ನು ಸ್ಥಾಪಿಸುವುದು), 218 (ಸಾರ್ವಜನಿಕ ಸೇವಕ ತಪ್ಪು ದಾಖಲೆಯನ್ನು ರಚಿಸುವುದು ಮತ್ತು 120 (ಬಿ) (ಅಪರಾಧ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
2002ರ ಗೋಧ್ರಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ ನೀಡಿದ್ದ ಕ್ಲೀನ್ ಚಿಟ್ ಅನ್ನು ಸುಪ್ರೀಂಕೋರ್ಟ್ ಜೂನ್ 24 ರಂದು ಎತ್ತಿ ಹಿಡಿದಿದ್ದು, ಈ ಬೆನ್ನಲ್ಲೇ ಮೂವರು ಅಧಿಕಾರಿಗಳನ್ನು ಬಂಧಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಇದನ್ನೂ ಓದಿ: ಗೋಧ್ರಾ ಹತ್ಯಾಕಾಂಡದಲ್ಲಿ ಮೋದಿ ಪಾತ್ರವಿದೆ ಎಂದಿದ್ದ ಐಪಿಎಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ!