ಅಹಮದಾಬಾದ್(ಗುಜರಾತ್): 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿ ಶಿಕ್ಷಕನಿಗೆ ಗುಜರಾತ್ ಹೈಕೋರ್ಟ್ ಜಾಮೀನು ನಿರಾಕರಿಸಿತು. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸಮೀರ್ ದವೆ ಅವರಿದ್ದ ಏಕಸದಸ್ಯ ಪೀಠವು, "ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರ ಬ್ರಹ್ಮ, ತಸ್ಮೇ ಶ್ರೀ ಗುರುವೇ ನಮಃ" ಎಂಬ ಸಂಸ್ಕೃತ ಶ್ಲೋಕ ಉಚ್ಚರಿಸಿ ಶಿಕ್ಷಕನ ಮೌಲ್ಯವನ್ನು ತಿಳಿಹೇಳಿದರು.
ಪ್ರಕರಣವೇನು?: ಜುಲೈ 2022 ರಂದು ಶಾಲೆಯಿಂದ ಹಿಂತಿರುಗುವಾಗ 12 ವರ್ಷದ ಬಾಲಕಿಯ ಖಾಸಗಿ ಅಂಗಗಳನ್ನು ಶಿಕ್ಷಕ ನಿಹಾರ್ ಬರಾದ್ ಮುಟ್ಟಿದ್ದಾನೆ. ಇದನ್ನು ಪುಟ್ಟ ಬಾಲಕಿ ತನ್ನ ಪೋಷಕರ ಬಳಿ ಹೇಳಿದ್ದು, ಮರುದಿನದಿಂದ ಶಾಲೆಗೆ ಹೋಗುವುದಿಲ್ಲ ಎಂದು ತಿಳಿಸಿದ್ದಳು. ಇದರಿಂದ ಎಚ್ಚೆತ್ತುಕೊಂಡ ಪೋಷಕರು ಶಾಲಾ ಆಡಳಿತ ಮಂಡಳಿಗೆ ವಿಷಯ ತಿಳಿಸಿ ನಂತರ ದುರ್ವರ್ತನೆ ತೋರಿದ ಶಿಕ್ಷಕನ ವಿರುದ್ಧ ಸೋಮನಾಥ ಜಿಲ್ಲೆಯ ಗಿರ್ ಗಡಾದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ಅಪರಾಧಿ ಶಿಕ್ಷಕನಿಗೆ ಕೋರ್ಟ್ ಜಾಮೀನು ನಿರಾಕರಿಸಿದ್ದಲ್ಲದೇ, ಇದು ಗಂಭೀರ ಮತ್ತು ಘೋರ ಅಪರಾಧ. ಪ್ರಕರಣದಲ್ಲಿ ಶಿಕ್ಷಕನೊಂದಿಗೆ ಯಾವುದೇ ಒಪ್ಪಂದ ಅಥವಾ ಇತ್ಯರ್ಥ ಮಾಡಿಕೊಳ್ಳುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿತು.
'ಶಿಕ್ಷಕ ವಿದ್ಯಾರ್ಥಿಗಳಿಗೆ ರಕ್ಷಕನಾಗಬೇಕು': ನ್ಯಾ.ದವೆ ಅವರು ಅಪರಾಧದ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಾ, ಶಿಕ್ಷಕ ವಿದ್ಯಾರ್ಥಿಗಳ ರಕ್ಷಕನಾಗಿ ಕಾರ್ಯನಿರ್ವಹಿಸಬೇಕು. ಆದರೆ ಈ ಶಿಕ್ಷಕ ಮಾಡಿರುವ ಅಮಾನವೀಯ ಕೃತ್ಯ ಗುರುವಿನ ಮೇಲಿರುವ ನಂಬಿಕೆಗೆ ದ್ರೋಹ ಬಗೆದಿದೆ. ಅಲ್ಲದೇ ಸಾಮಾಜಿಕ ಮೌಲ್ಯಗಳನ್ನು ಕಸಿದುಕೊಳ್ಳುವ ಪ್ರಕರಣವಾಗಿದೆ. ಹೀಗಾಗಿ, ಅಪರಾಧಿ ಯಾವುದೇ ಸಹಾನುಭೂತಿ, ದಯೆಗೆ ಅರ್ಹನಲ್ಲ. ಈತನ ಹೇಯ ಕೃತ್ಯ ಆ ಮಗುವಿನ ಜೀವನದುದ್ದಕ್ಕೂ ಮಾನಸಿಕವಾಗಿ, ಭಾವನಾತ್ಮಕವಾಗಿ ಘಾಸಿ ಮಾಡಿದೆ ಎಂದರು.
ಇದನ್ನೂ ಓದಿ: ಬಿಲ್ಕಿಸ್ ಬಾನು ಪ್ರಕರಣ: ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ 'ಸುಪ್ರೀಂ' ನ್ಯಾಯಮೂರ್ತಿ