ಅಹಮದಾಬಾದ್: ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನದ ನಂತರ ಮಹತ್ವದ ನಿರ್ಧಾರವೊಂದರಲ್ಲಿ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಗುಜರಾತ್ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಸಮೀರ್ ಜೆ. ದವೆ ಅವರಿದ್ದ ಪೀಠ ಈ ಆದೇಶ ನೀಡಿದೆ.
26 ಹೆಚ್ಚು ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ 22 ವರ್ಷದ ಅತ್ಯಾಚಾರ ಸಂತ್ರಸ್ತೆ ಪರ ವಕೀಲರು ಆ.22ರಂದು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಲೈಂಗಿಕ ದೌರ್ಜನ್ಯದಿಂದ ಮಹಿಳೆಗೆ ದೈಹಿಕ ಮತ್ತು ಭಾವನಾತ್ಮಕ ಆಘಾತ ಉಂಟಾದ ಹಿನ್ನೆಲೆ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಅರ್ಜಿಯಲ್ಲಿ ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ವೈದ್ಯಕೀಯ ಮಂಡಳಿಯ ವರದಿಯ ನಂತರ ಸಂತ್ರಸ್ತೆಗೆ ಆಗಸ್ಟ್ 28ರ ಒಳಗೆ ಗರ್ಭಪಾತ ಮಾಡಲು ಅನುಮತಿ ನೀಡಿದೆ. ವೈದ್ಯಕೀಯ ವರದಿಯಲ್ಲಿ ವಿಶೇಷ ಸೌಲಭ್ಯಗಳೊಂದಿಗೆ ಗರ್ಭಪಾತಕ್ಕೆ ಅನುಮತಿ ನೀಡಿರುವುದನ್ನು ಉಲ್ಲೇಖಿಸಲಾಗಿದೆ.
ವೈದ್ಯಕೀಯ ಪರೀಕ್ಷೆ ನಡೆಸುವಂತೆ ಆದೇಶಿಸಿದ್ದ ಕೋರ್ಟ್: ಈ ಪ್ರಕರಣದ ವಿಚಾರಣೆಯಲ್ಲಿ ತಜ್ಞ ವೈದ್ಯರ ಸಮಿತಿಯಿಂದ ಸಂತ್ರಸ್ತೆಗೆ ತಕ್ಷಣ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಹೈಕೋರ್ಟ್ ಆದೇಶಿಸಿತ್ತು. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಮುಗಿದ ತಕ್ಷಣ, ಆಗಸ್ಟ್ 25ರಂದು ನ್ಯಾಯಾಲಯದ ಮುಂದೆ ಸಂತ್ರಸ್ತೆಯ ವೈದ್ಯಕೀಯ ವರದಿಯನ್ನು ಹಾಜರುಪಡಿಸಲು ಆದೇಶಿಸಲಾಗಿತ್ತು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಂತೆಯೂ ಹೈಕೋರ್ಟ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿತ್ತು.
ಏನಿದು ಪ್ರಕರಣ: ಸಂತ್ರಸ್ತೆ ಪರವಾಗಿ ಅರ್ಜಿದಾರರು ಸಲ್ಲಿಸಿದ ರಿಟ್ ಅರ್ಜಿಯಲ್ಲಿ, 'ಸುರೇಂದ್ರ ನಗರದಲ್ಲಿನ ನೆರೆಹೊರೆಯ ಆರೋಪಿ ತನ್ನ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ. ಇಡೀ ಘಟನೆ ಅರ್ಜಿದಾರರ ಮನಸ್ಸು ಮತ್ತು ದೇಹದ ಮೇಲೆ ಅತ್ಯಂತ ಗಂಭೀರವಾದ ಮತ್ತು ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಿದೆ. ಇದರಿಂದ ಅವಳು ಮಗುವನ್ನು ಉಳಿಸಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ಹೈಕೋರ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್: ಕೆಲವು ದಿನಗಳ ಹಿಂದೆ, ಗುಜರಾತ್ ಹೈಕೋರ್ಟ್‌ನ ತೀರ್ಪಿನ(ಗರ್ಭಪಾತದ ಕೋರಿಕೆ ತಿರಸ್ಕಾರ) ಬಗ್ಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ನಂತರ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಗುಜರಾತ್ ಹೈಕೋರ್ಟ್ ಗರ್ಭಪಾತಕ್ಕೆ ಅನುಮತಿ ನೀಡಿರುವುದು ಇಲ್ಲಿ ಗಮನಾರ್ಹ.
'ಮದುವೆಗೆ ಹೊರತಾದ ಗರ್ಭಧಾರಣೆ ಮಾನಸಿಕ ಆಘಾತವನ್ನು ಉಂಟು ಮಾಡುವಂಥದ್ದು' ಎಂದು ಹೇಳಿರುವ ಸುಪ್ರೀಂ ಕೋರ್ಟ್ ಅತ್ಯಾಚಾರ ಸಂತ್ರಸ್ತೆಯೊಬ್ಬರ 27 ವಾರಗಳ ಭ್ರೂಣದ ಗರ್ಭಪಾತಕ್ಕೆ ಇತ್ತೀಚೆಗೆ ಅನುಮತಿ ನೀಡಿತ್ತು. ಗರ್ಭಪಾತಕ್ಕೆ ಈ ಹಿಂದೆ ಅವಕಾಶ ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್‌ನ ಕಾರ್ಯ ವೈಖರಿಗೆ ಸುಪ್ರೀಂ ಕೋರ್ಟ್ ಇದೇ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಗರ್ಭಪಾತದ ಕೋರಿಕೆಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿರುವುದು ಸರಿಯಲ್ಲ ಎಂದು ಹೇಳಿತ್ತು. "ವಿವಾಹ ವ್ಯವಸ್ಥೆಯೊಳಗಿನ ಭಾರತೀಯ ಸಮಾಜದಲ್ಲಿ ಗರ್ಭಧಾರಣೆ ದಂಪತಿಗೆ ಮಾತ್ರವಲ್ಲದೇ ಕುಟುಂಬ, ಸ್ನೇಹಿತರಿಗೆ ಸಂತೋಷ ತರುವಂಥದ್ದು. ಆದರೆ, ವಿವಾಹಕ್ಕೆ ಹೊರತಾದ ಗರ್ಭಧಾರಣೆ ಅಪಾಯಕಾರಿ. ಲೈಂಗಿಕ ದೌರ್ಜನ್ಯದಂತಹ ಸಂದರ್ಭಗಳಲ್ಲಂತೂ ಆಘಾತಕ್ಕೆ ಕಾರಣವಾಗುತ್ತದೆ. ಮಹಿಳೆಯರ ಮೇಲಿನ ಲೈಂಗಿಕ ಆಕ್ರಮಣವೇ ದುಃಖಕರ. ಅದರಿಂದ ಆಗುವ ಗರ್ಭಧಾರಣೆ ಮತ್ತಷ್ಟು ನೋವಿಗೆ ಕಾರಣವಾಗುತ್ತದೆ" ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.