ನವದೆಹಲಿ: ಕಾಂಗ್ರೆಸ್ ಪಕ್ಷವು ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಗೆ 39 ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ವಡ್ಗಾಮ್ ಕ್ಷೇತ್ರದಿಂದ ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರನ್ನು ಕಣಕ್ಕಿಳಿಸಲಾಗಿದೆ. ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ 2017ರಲ್ಲಿ ಇವರು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು.
ಕಾಂಗ್ರೆಸ್ ಈ ಎರಡೂ ಪಟ್ಟಿಗಳನ್ನು ಬಿಡುಗಡೆ ಮಾಡುವ ಮೂಲಕ ಇದುವರೆಗೆ ಒಟ್ಟು 142 ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕಿಳಿಸಿದಂತಾಗಿದೆ. ನವೆಂಬರ್ 4 ರಂದು ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು 43 ಅಭ್ಯರ್ಥಿಗಳ ಹೆಸರು ಪ್ರಕಟಿಸಿತ್ತು.
ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕೇಸರಿ ಪಕ್ಷ ಅಧಿಕಾರದಲ್ಲಿರುವ ಹಾಗು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕೈ ಪಕ್ಷ ಹವಣಿಸುತ್ತಿದೆ. ಈ ನಿಟ್ಟಿನಲ್ಲಿ ಬಲಿಷ್ಠ ಅಭ್ಯರ್ಥಿಗಳ ಹೆಸರುಗಳನ್ನು ಅಖಾಡಕ್ಕಿಳಿಸುತ್ತಿದೆ.
182 ಸದಸ್ಯಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಿಗದಿಯಾಗಿದೆ.
ಇದನ್ನೂ ಓದಿ: ಗುಜರಾತ್ ಚುನಾವಣೆ: ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ, 46 ಅಭ್ಯರ್ಥಿಗಳ ಹೆಸರು ಘೋಷಣೆ