ಅಹಮದಾಬಾದ್: ಗುಜರಾತ್‌ನಲ್ಲಿ ನಡೆಯಲಿರುವ ಎರಡನೇ ಹಂತದ ವಿಧಾನಸಭಾ ಚುನಾವಣಾ ಕಣದಲ್ಲಿರುವ ಐವರು ಬಿಜೆಪಿ ಅಭ್ಯರ್ಥಿಗಳು ಒಟ್ಟು 1200 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಇದರಲ್ಲಿನ ಅರ್ಧದಷ್ಟು ಸಂಪತ್ತು ಒಬ್ಬನೇ ಒಬ್ಬ ಅಭ್ಯರ್ಥಿಯ ಬಳಿಯಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ಸಂಸ್ಥೆ ಇತ್ತೀಚೆಗೆ ಪ್ರಕಟಿಸಿದ ವರದಿಯ ಪ್ರಕಾರ, ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಜಯಂತಿಭಾಯ್ ಸೋಮಾಭಾಯಿ ಪಟೇಲ್ ಅವರ ಆಸ್ತಿ 661 ಕೋಟಿ ರೂಪಾಯಿಯಾಗಿದೆ. ಅತಿ ಹೆಚ್ಚು ಘೋಷಿತ ಆಸ್ತಿ ಹೊಂದಿರುವ ಜಯಂತಿಭಾಯ್ ಅವರ ನಂತರದ ಸ್ಥಾನದಲ್ಲಿ ಸಿಧ್‌ಪುರದ ಬಿಜೆಪಿ ಅಭ್ಯರ್ಥಿ ಬಲ್ವಂತ್‌ಸಿನ್ಹ್ ಚಂದನ್‌ಸಿನ್ಹ್ ರಜಪೂತ್ ಇದ್ದಾರೆ. ಇವರು 343 ಕೋಟಿ ರೂಪಾಯಿಗೂ ಹೆಚ್ಚು ಸಂಚಿತ ಆಸ್ತಿ ಹೊಂದಿದ್ದಾರೆ.
ಇನ್ನು ವಿಜಾಪುರದ ರಮಣಭಾಯ್ ಡಿ. ಪಟೇಲ್ 95 ಕೋಟಿ ರೂ., ಬಾಬುಭಾಯಿ ಜಮ್ನಾದಾಸ್ ಪಟೇಲ್ 61 ಕೋಟಿ ರೂ. ಮತ್ತು ಆನಂದ್‌ನ ಯೋಗೇಶ್ ಆರ್. ಪಟೇಲ್ 46 ಕೋಟಿ ರೂ.ಗಳೊಂದಿಗೆ ಅತಿ ಹೆಚ್ಚು ಆಸ್ತಿ ಹೊಂದಿರುವ ಟಾಪ್ ಟೆನ್ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ. ಈ ಐದು ಬಿಜೆಪಿ ಅಭ್ಯರ್ಥಿಗಳ ಒಟ್ಟು ಆಸ್ತಿ 1235 ಕೋಟಿ ರೂಪಾಯಿಗಳಾಗಿರುವುದು ಕುತೂಹಲಕಾರಿ ಸಂಗತಿ.
ಅಲ್ಲದೆ ಡಿಸೆಂಬರ್ 5ರಂದು ನಡೆಯಲಿರುವ ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಶೇ 81ರಷ್ಟು ಬಿಜೆಪಿ ಅಭ್ಯರ್ಥಿಗಳು ಒಂದು ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಎಡಿಆರ್ ವರದಿ ಹೇಳಿದೆ. ಕಣದಲ್ಲಿರುವ 93 ಅಭ್ಯರ್ಥಿಗಳ ಪೈಕಿ 75 ಅಭ್ಯರ್ಥಿಗಳು ಒಂದು ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಆದರೆ, ಕೋಟ್ಯಧಿಪತಿಗಳ ವಿಚಾರದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಸ್ವಲ್ಪ ಮುಂದಿದೆ. 90 ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 77 ಮಂದಿ ಕೋಟ್ಯಧಿಪತಿಗಳಾಗಿದ್ದು, ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಶೇ 86ರಷ್ಟು ಕೋಟ್ಯಧಿಪತಿಗಳಿದ್ದಾರೆ.
ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 4.25 ಕೋಟಿ ರೂಪಾಯಿಯಾಗಿದೆ. 2017 ರಲ್ಲಿ ನಡೆದ ಗುಜರಾತ್ ವಿಧಾನಸಭಾ ಎರಡನೇ ಹಂತದ ಚುನಾವಣಾ ಕಣದಲ್ಲಿದ್ದ 822 ಅಭ್ಯರ್ಥಿಗಳ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 2.39 ಕೋಟಿ ರೂಪಾಯಿಗಳಷ್ಟಿತ್ತು. ಪಕ್ಷವಾರು ಅಭ್ಯರ್ಥಿಗಳ ಸರಾಸರಿ ಆಸ್ತಿ ನೋಡಿದರೆ, ಬಿಜೆಪಿಯ ಪಕ್ಷವಾರು ಸರಾಸರಿ ಆಸ್ತಿ ರೂ. 19.58 ಕೋಟಿ, ಕಾಂಗ್ರೆಸ್ 7.61 ಕೋಟಿ ಮತ್ತು ಆಮ್ ಆದ್ಮಿ ಪಕ್ಷ 5.28 ಕೋಟಿ ಆಗಿದೆ.
ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಐವರು ಅಭ್ಯರ್ಥಿಗಳು ತಮ್ಮ ಅಫಿಡವಿಟ್ನಲ್ಲಿ ತಾವು ಶೂನ್ಯ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಗಾಂಧಿನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿ ಪಟ್ನಿ ಮಹೇಂದ್ರಭಾಯಿ ಸೋಮಾಭಾಯಿ, ನರೋಡಾ ಕ್ಷೇತ್ರದಿಂದ ಪಟೇಲ್ ಸತ್ಯಕುಮಾರ್ ಕೆ, ಅಮರೈವಾಡಿ ಕ್ಷೇತ್ರದಿಂದ ಸತೀಶ್ ಹೀರಾಲಾಲ್ ಸೋನಿ, ಡ್ಯಾನಿಮಿಲ್ಡಾ ಕ್ಷೇತ್ರದಿಂದ ಪರ್ಮಾರ್ ಕಸ್ತೂರ್‌ಭಾಯ್ ರಾಂಚೋಡಭಾಯಿ ಮತ್ತು ಸಬರಮತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೀವನ್‌ಭಾಯ್ ರಮಾಭಾಯಿ ಪರ್ಮಾರ್ ಶೂನ್ಯ ಆಸ್ತಿ ಘೋಷಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಐಷಾರಾಮಿ ಲಂಬೋರ್ಗಿನಿ ಕಾರಲ್ಲಿ ಬಂದ ಕಾಂಗ್ರೆಸ್ ಅಭ್ಯರ್ಥಿ