ಅಹಮದಾಬಾದ್ (ಗುಜರಾತ್): ಅಹಮದಾಬಾದ್‌ನ ಬಾವ್ಲಾ-ಬಗೋದರಾ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆ ಆಗಿದೆ. ಗಂಭೀರವಾಗಿ ಗಾಯಗೊಂಡಿದ್ದವರಲ್ಲಿ ಇಬ್ಬರು ಇಂದು ಚಿಕಿತ್ಸೆ ಫಲಿಸದೇ ಚಿಕಿತ್ಸೆ ಮೃತಪಟ್ಟಿದ್ದಾರೆ. ಮೃತರು ಇಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇವರಿಬ್ಬರ ಸಾವು ಸೇರಿ ಮೃತರ ಸಂಖ್ಯೆ 12ಕ್ಕೆ ಏರಿದಂತಾಗಿದೆ. ಶುಕ್ರವಾರ ಸಂಭವಿಸಿದ ಈ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ 10 ಜನ ಮೃತಪಟ್ಟಿದ್ದರು. ಮೃತ 10ರಲ್ಲಿ ಒಂಬತ್ತು ಜನ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ರೈತ ಕುಟುಂಬವೊಂದು ದೇವರ ದರ್ಶನ ಮುಗಿಸಿಕೊಂಡು ಮಿನಿ ಟ್ರಕ್‌ನಲ್ಲಿ (ಟಾಟಾ ಏಸ್) ತಮ್ಮ ಗ್ರಾಮದತ್ತ ಬರುತ್ತಿತ್ತು. ಈ ವೇಳೆ ರಸ್ತೆ ಬಳಿ ನಿಂತಿದ್ದ ಲಾರಿಯೊಂದಕ್ಕೆ ಈ ಮಿನಿ ಟ್ರಕ್ ಹಿಂದಿನಿಂದ ಬಂದು ರಭಸವಾಗಿ ಡಿಕ್ಕಿ ಹೊಡೆದಿತ್ತು. ಪರಿಣಾಮ, ಮೂವರು ಮಕ್ಕಳು ಹಾಗೂ ಐವರು ಮಹಿಳೆಯರು ಸೇರಿದಂತೆ ಒಟ್ಟು 10 ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಅಹಮದಾಬಾದ್ ಜಿಲ್ಲಾ ಎಸ್ಪಿ ಅಮಿತ್ ಕುಮಾರ್ ವಾಸವ ಎಂಬುವರು ಘಟನೆ ನಡೆದ ದಿನದಂದೇ ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿ ಈ ಬಗ್ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: Himachal Accident: ಕಂದಕಕ್ಕೆ ಬಿದ್ದ ಬೊಲೆರೊ ವಾಹನ: 6 ಪೊಲೀಸ್ ಸಿಬ್ಬಂದಿ ಸೇರಿ 7 ಸಾವು
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಹಮದಾಬಾದ್ ರೇಂಜ್‌ನ ಇನ್ಸ್‌ಪೆಕ್ಟರ್ ಜನರಲ್ ಪ್ರೇಮ್ ವೀರ್ ಸಿಂಗ್ ಕೂಡ ಅಂದೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿದ್ದರು. ''ಸುಮಾರು 23 ಜನರನ್ನು ಕರೆದೊಯ್ಯುತ್ತಿದ್ದ ಮಿನಿ ಟ್ರಕ್ನ ಟೈರ್ ಪಂಕ್ಚರ್ ಆದ ಪರಿಣಾಮ, ರಸ್ತೆಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಮೃತರು ಮತ್ತು ಗಾಯಾಳುಗಳು ಖೇಡಾ ಜಿಲ್ಲೆಯ ಕಪಾಡ್ವಂಜ್ ತಾಲೂಕಿನರಾಗಿದ್ದು ಸುರೇಂದ್ರನಗರದ ಚೋಟಿಲಾ ಪಟ್ಟಣದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ'' ಎಂದು ಅವರು ಘಟನೆ ಬಗ್ಗೆ ಅಂದೇ ಮಾಹಿತಿ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಹ ದುರಂತದ ಬಗ್ಗೆ ಘಟನೆ ನಡೆದ ದಿನದಂತೆ ಸಂತಾಪ ಸೂಚಿಸಿ ಮೃತ ಕುಟುಂಬದವರಿಗೆ ಪರಿಹಾರ ಘೋಷಣೆ ಮಾಡಿದ್ದರು. ''ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಸಂಬಂಧಿಕರಿಗೆ ತಲಾ 2 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ ತಲಾ 50,000 ರೂ. ನೀಡಲಾಗುವುದು'' ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿಕೊಂಡಿದೆ.
"ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು.
ಇದನ್ನೂ ಓದಿ: Ahmedabad accident: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಸಾವು! ಪರಿಹಾರ ಘೋಷಣೆ