ಗಾಂಧಿನಗರ (ಗುಜರಾತ್): ದೇಶವು ತನ್ನ 75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಈ ಸಮಯದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸುತ್ತಿದೆ. ಗುಜರಾತ್ ವಿಧಾನಸಭೆ ಚುನಾವಣೆ ಕೇವಲ ಐದು ವರ್ಷಗಳಿಗೆ ಸೀಮಿತವಲ್ಲದೇ, ಈ ಚುನಾವಣೆ ಮುಂದಿನ 25 ವರ್ಷ ದೇಶದ ಅಭಿವೃದ್ಧಿಯ ದಿಕ್ಸೂಚಿಯಾಗಲಿದೆ ಎಂದು ಗುಜರಾತ್‌ನ ಗಾಂಧಿನಗರ ಜಿಲ್ಲೆಯ ದೆಹಗಾಮ್ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈ ಚುನಾವಣೆ ಗುಜರಾತ್ ಅಭಿವೃದ್ಧಿಯ ಭವಿಷ್ಯದ ಹಾದಿಯನ್ನು ನಿರ್ಧರಿಸುತ್ತದೆ. ಈ ಚುನಾವಣೆ ಮುಂದಿನ 25 ವರ್ಷಗಳಲ್ಲಿ ಗುಜರಾತ್ ಅನ್ನು ಸಮೃದ್ಧಗೊಳಿಸುತ್ತದೆ ಮತ್ತು ಅದರ ಏಳಿಗೆಗಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಲಿದೆ ಎಂದರು. ಆದ್ದರಿಂದ ಈ ಚುನಾವಣೆಯಲ್ಲಿ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮತದಾರರಿಗೆ ಕರೆ ನೀಡಿದರು.
ಮೊದಲು ಗುಜರಾತ್ ಚುನಾವಣೆಗಳು ಜಾತಿಯ ಆಧಾರದ ಮೇಲೆ ನಡೆಯುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜನ ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳ ನಿರ್ಮಾಣಗಳ ಬಗ್ಗೆ ಮಾತನಾಡುತ್ತಾರೆ. ಈಗ ಗುಜರಾತಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಚುನಾವಣೆ ನಡೆಯುತ್ತಿವೆ. ಹಿಂದೆ ಟ್ಯಾಂಕರ್ ರಾಜ್ (ನೀರಿನ ಟ್ಯಾಂಕರ್) ಆಡಳಿತ ನಡೆಸುತ್ತಿತ್ತು. ಯಾರ ಬಂಧುಗಳು ಗುತ್ತಿಗೆ ಪಡೆದಿದ್ದಾರೋ ಅವರಿಗೆ ನೀರು ಪೂರೈಕೆಯಾಗುತ್ತಿತ್ತು. ಗುಜರಾತಿನಲ್ಲಿ ಆಗ ರೌಡಿಗಳು ನೀರು ಸರಬರಾಜು ವ್ಯವಸ್ಥೆ ನಿಯಂತ್ರಿಸುತ್ತಿದ್ದರು. ಆದರೆ, ಈಗ ಪ್ರತಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ಅಭಿವೃದ್ಧಿ ಬಗ್ಗೆ ಚರ್ಚಿಸೋಣ ಬನ್ನಿ: ಕಾಂಗ್ರೆಸ್ಗೆ ಪ್ರಧಾನಿ ಮೋದಿ ಸವಾಲು