ನವ ದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯ ಸಂಪೂರ್ಣ ಚಿತ್ರಣ ಹೊರಬಿದ್ದಿದೆ. ರಾಜ್ಯದ ಇತಿಹಾಸದಲ್ಲೇ ಬಿಜೆಪಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸತತ 7ನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಿತು.
182 ಸ್ಥಾನಗಳ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1ರಂದು ಮೊದಲ ಹಂತ ಮತ್ತು ಡಿಸೆಂಬರ್ 5ರಂದು ಎರಡನೇ ಹಂತದಲ್ಲಿ ಮತದಾನ ನಡೆದಿತ್ತು. ಇಂದು ಮತ ಎಣಿಕೆ ನಡೆದಿದ್ದು ಬಿಜೆಪಿ 156 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಸಾಧನೆ ಮಾಡಿದೆ. ಕಾಂಗ್ರೆಸ್ 17 ಸ್ಥಾನ ಹಾಗೂ ಆಮ್ ಆದ್ಮಿ ಪಕ್ಷ 5 ಸ್ಥಾನ ಹಾಗೂ ಪಕ್ಷೇತರರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಶೇಕಡಾವಾರು ಮತ ಹಂಚಿಕೆಯಲ್ಲೂ ಸಾಕಷ್ಟು ಬದಲಾವಣೆಯಾಗಿದೆ.
ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ ಶೇ.53.8 ರಷ್ಟು ಮತ ಪಡೆದಿದೆ. ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನ ಪಡೆಯುವುದರೊಂದಿಗೆ ಶೇ.49ರಷ್ಟು ಮತ ಗಳಿಸಿತ್ತು. ಈ ಬಾರಿ ಶೇಕಡಾವಾರು ಮತದಲ್ಲೂ ಏರಿಕೆಯಾಗಿದೆ. ಜೊತೆಗೆ ಕಳೆದ ಬಾರಿಗಿಂತ ಹೆಚ್ಚುವರಿಯಾಗಿ ಬಿಜೆಪಿ 59 ಸ್ಥಾನಗಳನ್ನು ಗೆದ್ದು ಬೀಗಿದೆ. ಈ ಮೂಲಕ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪಕ್ಷವೊಂದು 150ರ ಗಡಿದಾಟಿ ದಿಗ್ವಿಜಯ ಸಾಧಿಸಿತು.
1985ರಲ್ಲಿ 149 ಸ್ಥಾನ ಗೆದ್ದಿದ್ದ ಕಾಂಗ್ರೆಸ್: ಗುಜರಾತ್‌ನಲ್ಲಿ 1995, 1998, 2002, 2007, 2012 ಮತ್ತು 2017ರಲ್ಲಿ ಸತತ ಆರು ಬಾರಿ ಬಿಜೆಪಿ ಅಧಿಕಾರ ಹಿಡಿದಿತ್ತು. ಮೋದಿ ನೇತೃತ್ವದಲ್ಲಿ 2002ರ ಚುನಾವಣೆಯಲ್ಲಿ 182 ಸ್ಥಾನಗಳಲ್ಲಿ ಕೇಸರಿ ಪಡೆ 127 ಸ್ಥಾನಗಳನ್ನು ಗೆದ್ದಿದ್ದೇ ಅತಿ ದೊಡ್ಡ ಗೆಲುವಾಗಿತ್ತು. ಆದರೆ, 1985ರಲ್ಲಿ ಮಾಧವಸಿನ್ಹಾ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದಿತ್ತು. ಇದುವೇ ರಾಜ್ಯ ಇತಿಹಾಸದಲ್ಲಿ ದಾಖಲಾದ ಬೃಹತ್ ಜಯವಾಗಿತ್ತು.
ಹೀಗಾಗಿಯೇ ಈ ಬಾರಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಈ ಹಿಂದಿನ ಎಲ್ಲ ದಾಖಲೆಗಳು ಪುಡಿಯಾಗಬೇಕೆಂದು 150 ಸ್ಥಾನಗಳ ಟಾರ್ಗೆಟ್ ನಿಗದಿ ಮಾಡಿಕೊಂಡಿದ್ದರು. ಪ್ರತಿ ಪ್ರಚಾರ ಸಭೆಯಲ್ಲೂ ಈ ಮಾತನ್ನು ಮೋದಿ ಒತ್ತಿ ಹೇಳುತ್ತಿದ್ದರು. ಅಂತೆಯೇ, 27 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಕಾಣಲಾಗದ ಗೆಲುವನ್ನು ಈ ಬಾರಿ ಬಿಜೆಪಿ ಕಂಡು ಗೆದ್ದು ಬೀಗಿದೆ.
ಮುಖಭಂಗ ಅನುಭವಿಸಿದ ಕಾಂಗ್ರೆಸ್: ಗುಜರಾತ್‌ನಲ್ಲಿ ಮೂರು ದಶಕಗಳಿಂದ ಕಾಂಗ್ರೆಸ್ ಅಧಿಕಾರದಿಂದ ದೂರ ಇದ್ದರೂ ಬಿಜೆಪಿಗೆ ಪ್ರಬಲ ವಿರೋಧ ಪಕ್ಷವಾಗಿ ಕಾಡುತ್ತಲೇ ಇತ್ತು. ಅಲ್ಲದೇ, ಚುನಾವಣೆಯಿಂದ ಚುನಾವಣೆಗೆ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಂಡಿದ್ದ ಕೈ ಪಡೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಭಾರಿ ಟಕ್ಕರ್ ಕೊಟ್ಟಿತ್ತು.
1990ರ ನಂತರದಿಂದಲೂ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಥಾನಗಳು ಹೆಚ್ಚಾಗುತ್ತಲೇ ಇದ್ದವು. 1990ರಲ್ಲಿ 33, 1995ರಲ್ಲಿ 45, 1998ರಲ್ಲಿ 53, 2002ರಲ್ಲಿ 51, 2007ರಲ್ಲಿ 59, 2012ರಲ್ಲಿ 60 ಮತ್ತು 2017ರಲ್ಲಿ 77 ಸ್ಥಾನಗಳನ್ನು ಗೆದ್ದು ಭಾರಿ ಪೈಪೋಟಿ ನೀಡಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ತನ್ನ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಹಿಂದಿಗಿಂತ ಕಡಿಮೆ ಸ್ಥಾನ ಗೆದ್ದು ಹೀನಾಯ ಸೋಲು ಕಂಡಿದೆ.
ಪ್ರತಿಪಕ್ಷದ ಸ್ಥಾನ ಕಳೆದುಕೊಂಡ ಕಾಂಗ್ರೆಸ್: ಕೇವಲ 17 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿರುವ ಕಾಂಗ್ರೆಸ್ ತನ್ನ ಶೇಕಡಾವಾರು ಮತಗಳನ್ನೂ ಕಳೆದುಕೊಂಡು ಗುಜರಾತ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಬಾರಿ ಶೇ.41ರಷ್ಟು ಮತ ಪಡೆದಿದ್ದ ಕಾಂಗ್ರೆಸ್, ಈ ಸಲ ಕೇವಲ ಶೇ.27ಕ್ಕೆ ಕುಸಿದಿದೆ. ಅಲ್ಲದೇ, ಅಧಿಕೃತ ಪ್ರತಿಪಕ್ಷದ ಸ್ಥಾನವನ್ನೂ ಕೈ ಪಡೆ ಕಳೆದುಕೊಳ್ಳುವ ಭೀತಿಯಲ್ಲಿದೆ. ಪ್ರತಿಪಕ್ಷದ ಸ್ಥಾನ ಪಡೆಯಬೇಕಾದರೆ ವಿಧಾನಸಭೆಯ ಶೇ.10ರಷ್ಟು ಸ್ಥಾನ ಹೊಂದಿರಬೇಕು. ಆದರೆ, ಈಗ 182 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಕೇವಲ 17 ಸ್ಥಾನ ಮಾತ್ರ.
ಗುಜರಾತ್‌ನಲ್ಲಿ ಖಾತೆ ತೆರೆದ ಆಮ್ ಆದ್ಮಿ ಪಕ್ಷ: ಇನ್ನು, ಮೊದಲ ಬಾರಿಗೆ ಗುಜರಾತ್ ಕಣಕ್ಕಿಳಿದಿರುವ ಆಮ್ ಆದ್ಮಿ ಪಕ್ಷ 5 ಸ್ಥಾನಗಳನ್ನು ಗೆದ್ದು, ಶೇ.12.9ರಷ್ಟು ಮತಗಳನ್ನು ಸೆಳೆಯುವಲ್ಲಿ ಯಶ ಕಂಡಿದೆ. ಉಳಿದಂತೆ, ಒಬ್ಬರು ಸಮಾಜವಾದಿ ಪಕ್ಷದಿಂದ ಮತ್ತು ಮೂವರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಟಾರ್ಗೆಟ್ 150... ಗುಜರಾತ್‌ನಲ್ಲಿ ಕೇವಲ ಗೆಲುವಷ್ಟೇ ಸಾಲದು..! ಪ್ರಧಾನಿ ಮೋದಿ ಬಯಸಿರುವುದಾದರೂ ಏನು?