ನವದೆಹಲಿ: ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ನೀಡುವ ಅವಧಿಯ ವಿಸ್ತರಣೆ ಮತ್ತು ಆನ್ಲೈನ್ ಗೇಮಿಂಗ್, ಕ್ಯಾಸಿನೊ ಮತ್ತು ಕುದುರೆ ರೇಸ್ಗಳ ಮೇಲೆ ಅತಿ ಹೆಚ್ಚು ಶೇ 28 ರಷ್ಟು ತೆರಿಗೆ ವಿಧಿಸುವ ಬಗ್ಗೆ ತೀರ್ಮಾನಗಳಾಗುತ್ತವೆ ಎಂಬ ನಿರೀಕ್ಷೆಗಳ ಮಧ್ಯೆ, ಆನ್ಲೈನ್ ಗೇಮಿಂಗ್, ಕ್ಯಾಸಿನೊ ಮತ್ತು ಕುದುರೆ ರೇಸ್ಗಳ ಕುರಿತಾಗಿ ಸಚಿವರ ಸಮಿತಿ ಸಲ್ಲಿಸಬೇಕಿದ್ದ ವರದಿ ಸಲ್ಲಿಸುವಿಕೆಯನ್ನು ಮುಂದೂಡಲಾಗಿದೆ. ನಿಯಂತ್ರಕ ಮಾರ್ಗಸೂಚಿಗಳ ಬಗ್ಗೆ ಸಚಿವರ ಸಮಿತಿಯು ಮುಂದಿನ 15 ದಿನಗಳಲ್ಲಿ ವರದಿ ಸಲ್ಲಿಸಲಿದೆ.
ಆನ್ಲೈನ್ ಗೇಮಿಂಗ್ನಲ್ಲಿ ಪಾಲ್ಗೊಳ್ಳಲು ವ್ಯಕ್ತಿಯೊಬ್ಬ ಪಾವತಿಸುವ ಸ್ಪರ್ಧೆಯ ಪ್ರವೇಶ ಶುಲ್ಕ ಸೇರಿದಂತೆ ಗೇಮ್ನ ಸಂಪೂರ್ಣ ಮೌಲ್ಯದ ಮೇಲೆ ತೆರಿಗೆ ವಿಧಿಸಬೇಕೆಂದು ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ನೇತೃತ್ವದ ಸಚಿವರ ಸಮಿತಿಯು ಶಿಫಾರಸು ಮಾಡಿತ್ತು.
ನಿನ್ನೆ ದೆಹಲಿಯಲ್ಲಿ ಆರಂಭವಾದ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಎರಡನೇ ದಿನವಾದ ಇಂದು ಮೇಲಿನ ಎರಡು ವಿಷಯಗಳು ಚರ್ಚೆಗೆ ಬರಬೇಕಿದ್ದವು.
ಕುದುರೆ ರೇಸಿಗೆ ಸಂಬಂಧಿಸಿದಂತೆ, ಟೋಟಲೈಸೇಟರ್ ಮತ್ತು ಬುಕ್ ಮೇಕರ್ ಬಳಿ ಬೆಟ್ ಕಟ್ಟಲಾದ ಒಟ್ಟಾರೆ ಮೊತ್ತದ ಮೇಲೆ ಜಿಎಸ್ಟಿ ವಿಧಿಸಬೇಕೆಂದು ಸಚಿವರ ಸಮಿತಿಯು ಶಿಫಾರಸು ಮಾಡಿತ್ತು. ಇನ್ನು ಕ್ಯಾಸಿನೊಗಳಿಗೆ ಸಂಬಂಧಿಸಿದಂತೆ ಆಟಗಾರನೊಬ್ಬ ಕ್ಯಾಸಿನೊದಿಂದ ಖರೀದಿಸುವ ಚಿಪ್ ಅಥವಾ ಕಾಯಿನ್ಗಳ ಮೇಲೆ ಜಿಎಸ್ಟಿ ವಿಧಿಸಬೇಕೆಂದು ಸೂಚಿಸಲಾಗಿತ್ತು. ಇದರ ಹೊರತಾಗಿ ಪ್ರತಿ ಸುತ್ತಿನಲ್ಲಿಯೂ ಆಡುವ ಬೆಟ್ಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಹಾಗೆಯೇ ಹಿಂದಿನ ರೌಂಡ್ಸ್ಗಳಲ್ಲಿ ಗೆದ್ದು ಮಾಡುವ ಬೆಟ್ಗಳಿಗೂ ಮತ್ತೆ ತೆರಿಗೆ ಇರುವುದಿಲ್ಲ ಎಂದು ಸಚಿವರ ಸಮಿತಿಯ ವರದಿ ಹೇಳಿದೆ.