ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರಕ್ಕೆ ಅಮೆರಿಕ ಸೇರಿ ವಿಶ್ವದ ಹಲವೆಡೆಯಿಂದ ಭಾರಿ ಖಂಡನೆ ವ್ಯಕ್ತವಾಗುತ್ತಿದೆ. ಇದೀಗ ಅಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳಿಗೆ ಖ್ಯಾತ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರು ಕೂಡಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
'ಬಾಂಗ್ಲಾದೇಶವು ಈಗ ಜಿಹಾದಿಸ್ತಾನ್ ಆಗಿ ಮಾರ್ಪಟ್ಟಿದೆ. ಅಲ್ಲಿ ಮದರಸಾಗಳು ಮೂಲಭೂತವಾದದ ತಳಹದಿಯಾಗಿದ್ದು, ಶೇಖ್ ಹಸೀನಾ ಸರ್ಕಾರವು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸುತ್ತಿದೆ' ಎಂದು ಅವರು ಹೇಳಿದ್ದಾರೆ. 'ನೆರೆಯ ದೇಶದಲ್ಲಿ ಹಿಂದೂಗಳು ಮತ್ತು ಬೌದ್ಧರು ಮೂರನೇ ದರ್ಜೆಯ ನಾಗರಿಕರಾಗಿದ್ದಾರೆ. ದೇಶದಲ್ಲಿ ಬೆಳೆಯುತ್ತಿರುವ ಹಿಂದೂ ವಿರೋಧಿ ಮನಸ್ಥಿತಿ ನಿಜಕ್ಕೂ ಆತಂಕಕಾರಿ' ಎಂದು ತಸ್ಲೀಮಾ ಕಳವಳ ವ್ಯಕ್ತಪಡಿಸಿದ್ದಾರೆ.
ಹಿಂದೂ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿ ಮಾಡಿ ದುರ್ಗಾ ಪೂಜೆಯ ವೇಳೆ ದೇವಾಲಯಗಳನ್ನು ಧ್ವಂಸಗೊಳಿಸಿರುವುದನ್ನು ನೋಡುತ್ತಿದ್ದೇವೆ. ಕಳೆದ ವಾರ ಕೊಮಿಲ್ಲಾದ ದುರ್ಗಾ ಪೂಜಾ ಸ್ಥಳದಲ್ಲಿ ನಡೆದ ಹಿಂಸಾತ್ಮಕ ಕೃತ್ಯದಿಂದ ಕೋಮು ಉದ್ವಿಗ್ನತೆ ಉಂಟಾಗಿತ್ತು. ಇದು ಅನೇಕ ಜಿಲ್ಲೆಗಳಲ್ಲಿ ಘರ್ಷಣೆಗೆ ಕಾರಣವಾಗಿದೆ.
ರಾಷ್ಟ್ರೀಯ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಘಟನೆಯನ್ನು ಖಂಡಿಸಿರುವ ಖ್ಯಾತ ಬರಹಗಾರ್ತಿ, ನಾನು ಇದನ್ನು ಇನ್ನು ಮುಂದೆ ಬಾಂಗ್ಲಾದೇಶ ಎಂದು ಕರೆಯಲು ಇಷ್ಟಪಡುವುದಿಲ್ಲ. ಇದು ಈಗ ಜಿಹಾದಿಸ್ತಾನ್ ಆಗಿ ಮಾರ್ಪಟ್ಟಿದೆ ಎಂದಿದ್ದಾರೆ.
ಹಾಲಿ ಸರ್ಕಾರ ಸೇರಿದಂತೆ ಎಲ್ಲಾ ಸರ್ಕಾರಗಳು ಧರ್ಮವನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿದ್ದವು. ಅವರು ಇಸ್ಲಾಂ ಧರ್ಮವನ್ನು ರಾಜ್ಯ ಧರ್ಮವನ್ನಾಗಿ ಮಾಡಿದರು. ಹೀಗಾಗಿ ಹಿಂದೂಗಳು ಮತ್ತು ಬೌದ್ಧರು ಮೂರನೇ ದರ್ಜೆಯ ಪ್ರಜೆಗಳಾಗಿ ಇಂತಹ ಕಿರುಕುಳಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷ ದುರ್ಗಾ ಪೂಜೆಯ ಸಮಯದಲ್ಲಿ ಹಿಂದೂಗಳ ಮೇಲೆ 'ಜಿಹಾದಿ' ದಾಳಿಯ ಸಾಧ್ಯತೆ ಬಗ್ಗೆ ಪ್ರಧಾನಿ ಶೇಖ್ ಹಸೀನಾಗೆ ಚೆನ್ನಾಗಿ ತಿಳಿದಿದೆ. ಹೀಗಿದ್ದರೂ ಹಿಂದೂ ಅಲ್ಪಸಂಖ್ಯಾತರಿಗೆ ಅವರೇಕೆ ರಕ್ಷಣೆ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
1994ರಲ್ಲಿ ಇಸ್ಲಾಮಿಕ್ ವಿರೋಧಿ ದೃಷ್ಟಿಕೋನಗಳಿಗಾಗಿ ಮೂಲಭೂತವಾದಿ ಸಂಘಟನೆಗಳು ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ತಸ್ಲೀಮಾ ನಸ್ರೀನ್ ಬಾಂಗ್ಲಾದೇಶ ತೊರೆಯಬೇಕಾಯಿತು. ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಭಾವನೆ ಹೊಸದೇನಲ್ಲ. ದುರ್ಗಾ ಪೂಜೆ ಸಮಯದಲ್ಲಿ ಹಿಂದೂಗಳಿಗೆ ರಕ್ಷಣೆ ನೀಡದೇ ಇರುವುದು ಇಲ್ಲಿ ಉಲ್ಲೇಖಾರ್ಹ.
ಇದನ್ನೂ ಓದಿ: ಬಾಂಗ್ಲಾದಲ್ಲಿ ದೇವಾಲಯಗಳಿಗೆ ಧಕ್ಕೆ: ಹಿಂದೂ ಸಂಘಟನೆಗಳಿಂದ ಭಾರಿ ಪ್ರತಿಭಟನೆ