ಹಲ್ದ್ವಾನಿ (ಉತ್ತರಾಖಂಡ್): ಭೂಕುಸಿತದಿಂದಾಗಿ ಇಲ್ಲಿನ ಕತ್ಗೋಡಂ ಹೈದಾಖಾನ್ ರಸ್ತೆಯನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಈ ರಸ್ತೆಯನ್ನೇ ನಂಬಿಕೊಂಡಿದ್ದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಯ ದುರಸ್ತಿಗೆ ಆಗ್ರಹಿಸಿ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ.
ಇಂದು ಪ್ರತಿಪಕ್ಷ ನಾಯಕ ಯಶಪಾಲ್ ಆರ್ಯ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ವರನೊಬ್ಬ ಕೂಡ ಧರಣಿಯಲ್ಲಿ ಕುಳಿತು ಗ್ರಾಮದ ಜನರ ಸಮಸ್ಯೆಯನ್ನು ಎತ್ತಿ ತೋರಿಸುವಲ್ಲಿ ನೆರವಾದರು.
ವಾಸ್ತವವಾಗಿ ಪ್ರತಿಭಟನಾ ಸ್ಥಳದ ಸಮೀಪದಿಂದ ಮದುವೆ ಮೆರವಣಿಗೆ ಹೋಗುತ್ತಿತ್ತು. ರಸ್ತೆಯ ಬೇಡಿಕೆಗಾಗಿ ಧರಣಿ ನಡೆಯುತ್ತಿರುವುದನ್ನು ಕಂಡ ವರ ತನ್ನ ಅತ್ತೆಯ ಮನೆಗೆ ಹೋಗದೇ, ಧರಣಿಯಲ್ಲಿ ಕುಳಿತು ಅಚ್ಚರಿ ಮೂಡಿಸಿದ್ದಾರೆ.
ಧರಣಿ ಕುಳಿತ ವರ: ವರ ತನ್ನ ಮದುವೆಗಿಂತಲೂ ಸಾಮಾಜಿಕ ಜವಾಬ್ದಾರಿಯನ್ನು ಮನದಲ್ಲಿಟ್ಟುಕೊಂಡು ಒಂದು ಗಂಟೆ ಧರಣಿ ಕುಳಿತು ತನ್ನ ಜವಾಬ್ದಾರಿ ಪೂರೈಸಿ ಇತರರಿಗೆ ಮಾದರಿ ಆಗಿದ್ದಾನೆ. ಬಳಿಕ ವಧುವಿನ ಮನೆಗೆ ಮದುವೆ ಮೆರವಣಿಗೆ ಹೊರಟಿದೆ.
ಕೋಟಬಾಗ್‌ನಿಂದ ಪಾಟ್ಲಿಯಾಗೆ ಹೋಗುವ ಈ ಮೆರವಣಿಗೆಯು ಕಾಲ್ನಡಿಗೆಯಲ್ಲಿ ಸುಮಾರು 5 ಕಿಲೋಮೀಟರ್ ಪ್ರಯಾಣಿಸಬೇಕಾಗಿತ್ತು. ಮದುಮಗ ರಾಹುಲ್ ತನ್ನ ವಧುವನ್ನು ವರಿಸಲು ಹಾಳಾದ ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿಯೇ ಪಟಾಲಿಯಾಕ್ಕೆ ತೆರಳಿದ್ದು, ಇಲ್ಲಿನ ಸಮಸ್ಯೆ ಎಷ್ಟಿದೆ ಎಂಬುದಕ್ಕೆ ಕೈಗನ್ನಡಿ ಆಗಿದೆ.
ಈ ಬಗ್ಗೆ ವರ ರಾಹುಲ್ ಮಾತನಾಡಿ, ರಸ್ತೆ ಬಹಳ ದಿನಗಳಿಂದ ಹಾಳಾಗಿದೆ. ಆದರೂ ರಸ್ತೆ ಸರಿಪಡಿಸುವ ಭರವಸೆ ಇಲ್ಲ. ಹೀಗಾಗಿ ವಧುವನ್ನು ಕರೆದುಕೊಂಡು ಬರಲು 5 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಬೇಕು. ಹೀಗಾಗಿ ಕಾಂಗ್ರೆಸ್ ಪ್ರತಿಭಟನೆಯನ್ನು ಬೆಂಬಲಿಸಲು ನಾನು ಸಹ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
150 ಗ್ರಾಮಗಳ ಸಂಪರ್ಕ ಕಡಿತ: ಭೂಕುಸಿತದಿಂದ ಕತ್ಗೊಡಂ ಹೈದಖಾನ್ ರಸ್ತೆ ಕಳೆದ ಒಂದು ತಿಂಗಳಿನಿಂದ ಮುಚ್ಚಲ್ಪಟ್ಟಿದೆ. ಹೀಗಾಗಿ 150 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಪ್ರತಿ ಪಕ್ಷದ ನಾಯಕ ಯಶಪಾಲ್ ಆರ್ಯ ಇಂದು ಭೂಕುಸಿತದಿಂದ ಮುಚ್ಚಿದ ಪ್ರದೇಶಕ್ಕೆ ಇಂದು ಭೇಟಿ ನೀಡಿದರು. ಸರ್ಕಾರದ ವಿರುದ್ಧ ಸಾಂಕೇತಿಕ ಉಪವಾಸ ಆಚರಿಸಿ ಆಕ್ರೋಶ ವ್ಯಕ್ತಪಡಿಸಿದರು. ಇವರ ಉಪವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕೈ ಜೋಡಿಸಿದರು.
ಓದಿ: ಭೂ ಕುಸಿತದಿಂದ ಪಂಚಾಯಿತಿ ಅಧ್ಯಕ್ಷನ ಮನೆ ನೆಲಸಮ.. ಏಳು ಜನ ಸಾವು, ಘಟನಾ ಸ್ಥಳಕ್ಕೆ ತಲುಪದ ರಕ್ಷಣಾ ತಂಡ