ಪೊನ್ನಾವರಂ(ಆಂಧ್ರಪ್ರದೇಶ): ಹುಟ್ಟೂರು, ತಾಯ್ನಾಡು ಮತ್ತು ಮಾತೃಭಾಷೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ ರಮಣ ಹೇಳಿದರು.
ಪೊನ್ನಾವರಂನಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಜೆಐ ಎನ್ ವಿ ರಮಣ, ನನ್ನ ಉನ್ನತಿಗೆ ಕುಟುಂಬ ಸದಸ್ಯರ ಕೊಡುಗೆ ಅಪಾರವಾಗಿದೆ. ಪೊನ್ನಾವರಂ ಗ್ರಾಮಕ್ಕೂ ನನಗೂ ವಿಶೇಷ ಸಂಬಂಧವಿದೆ. ಶಿಕ್ಷಕರು ತಮ್ಮನ್ನು ತುಂಬಾ ಪ್ರೀತಿಯಿಂದ ನೋಡುತ್ತಿದ್ದರು ಎಂದು ನೆನಪಿಸಿಕೊಂಡರು.
ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ 'ಏಕತೆ'ಯೇ ಉತ್ತಮ ವಿಧಾನ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿಗಳು, ತೆಲುಗಿನ ಶ್ರೇಷ್ಠತೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಮನವಿ ಮಾಡಿದರು. ದೆಹಲಿಯಲ್ಲಿ ಅನೇಕ ಜನರು ತೆಲುಗಿನ ಶ್ರೇಷ್ಠತೆಯ ಬಗ್ಗೆ ಹೇಳುತ್ತಾರೆ. ಜತೆಗೆ ರಾಜ್ಯಗಳಲ್ಲಿ ನಿರ್ಮಿಸಲಾದ ಪ್ರಸಿದ್ಧ ಕಟ್ಟಡಗಳನ್ನು ಶ್ಲಾಘಿಸುತ್ತಾರೆ ಎಂದರು.
ತೆಲುಗು ನಾಡಿಗೆ ಸರಿಯಾದ ಅಸ್ಮಿತೆ ಇಲ್ಲ ಎಂಬುದನ್ನು ಅರಿತಿರುವ ಅವರು, ತೆಲುಗು ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ..ಪೊನ್ನಾವರಂ ಜನರ ಆಶೀರ್ವಾದಕ್ಕಾಗಿ ಬಂದಿದ್ದೇನೆ. ನಾನು ಎಷ್ಟೇ ಬೆಳೆದರೂ ನನ್ನ ಊರನ್ನು ಮರೆಯುವುದಿಲ್ಲ. ನಮ್ಮ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ. ಸಮಸ್ಯೆಗಳ ನಿವಾರಣೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.
ತೆಲುಗು ನಾಡಿನ ಹಿರಿಮೆ ಜನರಿಗೆ ತಿಳಿಯುವಂತೆ ನಾವು ನಡೆದುಕೊಳ್ಳಬೇಕು. 'ಭಾರತ್ ಬಯೋಟೆಕ್' ಸಂಸ್ಥಾಪಕರು ತೆಲುಗು ನಾಡಿನ ಖ್ಯಾತ ವ್ಯಕ್ತಿ. ಅವರು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಯೋಟೆಕ್ ಕಂಪನಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದು ನಮ್ಮ ನಾಡಿಗೆ ಹೆಮ್ಮೆಯ ವಿಷಯ ಎಂದು ಸಿಜೆಐ ಪ್ರತಿಪಾದಿಸಿದರು.
ಇದನ್ನೂ ಓದಿ: Watch... ಎತ್ತಿನಗಾಡಿನಲ್ಲಿ ಸಿಜೆಐ ಎನ್ವಿ ರಮಣ: ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ