ನವದೆಹಲಿ : ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಅವರು 32ನೇ ವಯಸ್ಸಿಗೆ ಹೃದಯಾಘಾತದಿಂದ (ಕಾರ್ಡಿಯಾಕ್ ಅರೆಸ್ಟ್ ) ಸಾವನ್ನಪ್ಪಿದ್ದಾರೆ. 'ಪಂಖೂರಿ' ಎಂಬ ಮಹಿಳಾ ಕೇಂದ್ರಿತ ಸಾಮಾಜಿಕ ಸಮುದಾಯ ವೇದಿಕೆ ಮತ್ತು ಸ್ಟಾರ್ಟ್ ಅಪ್ ಗ್ರಾಬ್‌ಹೌಸ್‌ನ ಸಂಸ್ಥಾಪಕಿ ಆಗಿ ಪಂಖೂರಿ ಹೆಸರು ಮಾಡಿದ್ದರು. ಇವರ ಅಗಲಿಕೆಗೆ ಅನೇಕ ಉದ್ಯಮಿಗಳು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಲಾರಿ ಕ್ಯಾಪಿಟಲ್‌ನ ಸಂಸ್ಥಾಪಕಿ ವಾಣಿ ಕೋಲಾ, ಪಂಖೂರಿ ಇನ್ನಿಲ್ಲ ಎಂದು ತಿಳಿದಾಗ ನನಗೆ ಆಘಾತವಾಯಿತು. ಅವಳ ಆಲೋಚನೆಗಳಿಂದ ತುಂಬಿದ ಮತ್ತು ಉತ್ಸಾಹಭರಿತ ಮಹಿಳೆಯಾಗಿದ್ದಳು. ಆತ್ಮವಿಶ್ವಾಸದ ಹುಡುಗಿ ಇನ್ನಿಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ ಎಂದಿದ್ದಾರೆ.
ಸಿಕ್ವೊಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಂಜನ್ ಆನಂದನ್ ಟ್ವೀಟ್ ಮಾಡಿ, ಪಂಖೂರಿ ಹಠಾತ್ ಸಾವಿನಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಪಂಖುರಿ ಯಾವಾಗಲು ಉತ್ಸಾಹದಿಂದ ಕೂಡಿರುತ್ತಿದ್ದರು. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಕುಟುಂಬಸ್ಥರಿಗೆ ದುಃಖ ಬರಿಸುವ ಶಕ್ತಿಯನ್ನು ದೇವರು ನೀಡಲೆಂದು ಪಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಪಂಖೂರಿ ಮೂಲತಃ ಝಾನ್ಸಿಯವರಾಗಿದ್ದು, ರಾಜೀವ್ ಗಾಂಧಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ನಂತರ ಟೀಚ್ ಫಾರ್ ಇಂಡಿಯಾದಲ್ಲಿ ಫೆಲೋಶಿಪ್ ಪೂರ್ಣಗೊಳಿಸಿದರು. ಅವರು 'ಪಂಖುರಿ' ಸ್ಥಾಪಿಸುವ ಮೊದಲು ಟೆಕ್ ಪ್ಲಾಟ್‌ಫಾರ್ಮ್‌ಗಳಾದ ಜೆಸ್ಟ್‌ಮನಿ ಮತ್ತು ಕ್ವಿಕರ್‌ನಲ್ಲಿ ವರ್ಷಪೂರ್ತಿ ಕೆಲಸ ಮಾಡಿದ್ದರು.