ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇಡಿ) ನಿರ್ದೇಶಕರ ಅಧಿಕಾರದ ಅವಧಿಯನ್ನು ಈಗಿನ ಎರಡರಿಂದ ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಲು ನಿರ್ಧರಿಸಿದೆ.
Central Government to move Bills to extend CBI, ED directors tenures: ಕೇಂದ್ರ ಸಚಿವ ಜಿತೇಂದ್ರ ಸಿಂಗ್ 'ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ (ತಿದ್ದುಪಡಿ) ಮಸೂದೆ, 2021' ಮತ್ತು 'ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ, 2021' ಅನ್ನು ಮೇಲ್ಮನೆಯಲ್ಲಿಂದು ಮಂಡಿಸಲಿದ್ದಾರೆ.
ಡಿಸೆಂಬರ್ 9 ರಂದು ಲೋಕಸಭೆಯಲ್ಲಿ ಈ ಎರಡು ಮಸೂದೆಗಳನ್ನು ಪ್ರತ್ಯೇಕವಾಗಿ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ಇವುಗಳ ಕುರಿತು ಪ್ರತಿಪಕ್ಷದ ಸದಸ್ಯರು ಮಂಡಿಸಿದ ವಿವಿಧ ತಿದ್ದುಪಡಿಗಳನ್ನು ಸದನ ತಿರಸ್ಕರಿಸಿತು.
ಸಿಬಿಐ, ಇಡಿ ನಿರ್ದೇಶಕರ ಅಧಿಕಾರದ ಅವಧಿ ವಿಸ್ತರಣೆಗೆ ಹಲವಾರು ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಎರಡು ಪ್ರಮುಖ ತನಿಖಾ ಸಂಸ್ಥೆಗಳ ಸ್ವಾತಂತ್ರ್ಯವನ್ನು ಬುಡಮೇಲು ಮಾಡುವ ಪ್ರಯತ್ನ ಇದು ಎಂದು ಆರೋಪಿಸಿದ್ದಾರೆ.
ಮಸೂದೆ ಮಂಡನೆಯಿಂದ ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಈ ಕ್ರಮ ಅಗತ್ಯ ಎಂದು ಆಡಳಿತ ಪಕ್ಷ ಬಿಜೆಪಿ ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ನಿವೃತ್ತ ನ್ಯಾಯಾಧೀಶರ ಪಿಂಚಣಿ ಏರಿಕೆಗೆ ಮಸೂದೆ: ರಾಜ್ಯಸಭೆಯಲ್ಲಿ ಮಂಡನೆ