ಪಾಣಿಪತ್ (ಹರಿಯಾಣ): ಸುಮಾರು ಎರಡೂವರೆ ವರ್ಷಗಳ ಹಿಂದೆ ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಆ ಸಂತ್ರಸ್ತ ಮಹಿಳೆಗೆ ಅಧಿಕಾರಿಗಳು ಸಹಾಯ ಮಾಡುವ ಬದಲು ಮತ್ತಷ್ಟು ಕಷ್ಟ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆಸಿಡ್ ದಾಳಿಯಾದ ನಂತರ ಆ ಮಹಿಳೆ ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದರು. ಕೆಲಸಕ್ಕೆ ಹೋಗುವುದು ಕೂಡ ಆಕೆಗೆ ಕಷ್ಟವಾಗಿತ್ತು. ಮುಖ ವಿರೂಪಗೊಂಡು, ಆಕೆ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಈಗ ಸರ್ಕಾರ ಕೂಡ ಮಹಿಳೆಯ ಕುಟುಂಬಕ್ಕೆ ಅಗತ್ಯವಿರುವ ಪ್ರಯೋಜನಗಳನ್ನು ನೀಡದೆ ಸತಾಯಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
2020ರ ಪಾಣಿಪತ್ ಆ್ಯಸಿಡ್ ದಾಳಿ ಪ್ರಕರಣದ ಸಂತ್ರಸ್ತ ಮಹಿಳೆ ಕುಟುಂಬವನ್ನು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿದೆ) ನಿಂದ ಕೈಬಿಡಲಾಗಿದೆ. ಅದರ ಅಡಿ ಬರುವ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಆಕೆಗೆ ನೀಡುವುದನ್ನು ನಿಲ್ಲಿಸಲಾಗಿದೆ. ಮಹಿಳೆಯ ಪತಿ ಕಾರ್ಖಾನೆಯ ಕೆಲಸಗಾರ, ತಿಂಗಳಿಗೆ ಕೇವಲ 13,000 ರೂಪಾಯಿಗಳನ್ನು ಪಡೆಯುತ್ತಾರೆ. ಆದರೆ, ಅವರ ಆದಾಯವನ್ನು 25,000 ರೂಪಾಯಿ ಎಂದು ತಪ್ಪಾಗಿ ನಮೂದಿಸಿರುವುದು ಬಿಪಿಎಲ್ ಪ್ರಯೋಜನಗಳಿಂದ ಅವರನ್ನು ಅನರ್ಹಗೊಳಿಸಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಇವತ್ತಿಗೂ ಅವರ ಕುಟುಂಬದ ರೇಷನ್ ಕಾರ್ಡ್ನಲ್ಲಿ ಮಹಿಳೆಯ ಆದಾಯವನ್ನು ತಿಂಗಳಿಗೆ 10 ಸಾವಿರ ಎಂದು ನಮೂದಿಸಲಾಗಿದೆ. ಕಾರ್ಖಾನೆಯಲ್ಲಿ 12 ಸಾವಿರ ರೂ.ಗೆ ಕೂಲಿ ಕೆಲಸ ಮಾಡುವ ಅವರ ಪತಿಯ ಆದಾಯವನ್ನು ತಿಂಗಳಿಗೆ 25 ಸಾವಿರ ಎಂದು ತಪ್ಪಾಗಿ ಬರೆಯಲಾಗಿದೆ. ಸರ್ಕಾರ ಮಾಡಿದ ಈ ತಪ್ಪುಗಳಿಂದ ಆ್ಯಸಿಡ್ ದಾಳಿಗೊಳಗಾದ ಮಹಿಳೆ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅದಲ್ಲದೇ ಆರೋಗ್ಯ ಇಲಾಖೆ ಮಹಿಳೆಯನ್ನು ಶೇಕಡಾ 63 ರವರೆಗೆ ವಿಕಲಚೇತನರು ಎಂದು ಪ್ರಮಾಣೀಕರಿಸಿದೆ.
ಆಕೆಗೆ ಬರಬೇಕಿರುವ ಪಿಂಚಣಿಯನ್ನೂ ಕೂಡ ಇಲಾಖೆ ನೀಡಿಲ್ಲ. ಈ ಪಿಂಚಣಿಗಾಗಿ ಮಹಿಳೆ ಕಚೇರಿಗೆ ಅಲೆದಾಡಿ ಸಾಕಾಗಿ ಮನೆಯಲ್ಲಿ ಕುಳಿತಿದ್ದಾರೆ. ಇಲ್ಲಿಯವರೆಗೆ ಸರ್ಕಾರ ಮಹಿಳೆಗೆ ಕೇವಲ 3 ಲಕ್ಷ ರೂ ಅಷ್ಟೆ ಸಹಾಯಧನ ನೀಡಿದೆ. ಸಂತ್ರಸ್ತ ಮಹಿಳೆ ಹೇಳುವಂತೆ ತನ್ನ ಮೇಲೆ ಆ್ಯಸಿಡ್ ದಾಳಿಗೂ ಮುನ್ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಹೊಲಿಗೆ ಯಂತ್ರದಲ್ಲಿ ಕೈಮಗ್ಗದ ಕೆಲಸವನ್ನೂ ಮಾಡುತ್ತಿದ್ದೆ. ಇದರಿಂದ ಆಕೆ ತಿಂಗಳಿಗೆ 10 ರಿಂದ 15 ಸಾವಿರ ರೂ. ವರೆಗೆ ದುಡಿಯುತ್ತಿದ್ದರು.
ಅದೇ ವೇಳೆ ಗಂಡ ಕೂಡ ಕೆಲಸಕ್ಕೆ ಹೂಗುತ್ತಿದ್ದ ಕಾರಣ ಆತನ ಆದಾಯವೂ 12 ರಿಂದ 13 ಸಾವಿರ ರೂ. ಇರುತ್ತಿತ್ತು. ಆ ಸಮಯದಲ್ಲಿ ಆಕೆಯ ಕುಟುಂಬದ ಆದಾಯವನ್ನು ಕುಟುಂಬದ ರೇಷನ್ ಕಾರ್ಡ್ನಲ್ಲಿ ತಿಂಗಳಿಗೆ 12 ಸಾವಿರ ರೂ. ನಮೂದಿಸಲಾಗಿತ್ತು. ಆದರೆ, ಇಂದು ಆಕೆಯ ಮೇಲೆ ಖರ್ಚಿನ ಹೊರೆ ಹೆಚ್ಚಾಗಿದ್ದು, ಕೆಲಸ ಮಾಡುವ ಸಾಮರ್ಥ್ಯವೂ ಇಲ್ಲದಂತಾಗಿದೆ. ಆದರೂ ಇವತ್ತಿಗೂ ಆಕೆಯ ಆದಾಯವನ್ನು ತಿಂಗಳಿಗೆ 10,000 ರೂ. ಎಂದು ನಮೂದಿಸಲಾಗಿದೆ.
ಇದೀಗ ಆಕೆಯ ಪತಿಯ ಆದಾಯವನ್ನು ತಿಂಗಳಿಗೆ 25,000 ಎಂದು ತಪ್ಪಾಗಿ ತೋರಿಸಿರುವುದರಿಂದ ಆಕೆಯ ಹೆಸರನ್ನು ಬಿಪಿಎಲ್ ವರ್ಗದಿಂದ ಕಡಿತಗೊಳಿಸಲಾಗಿದೆ. ಮೂವರು ಮಕ್ಕಳ ವಿದ್ಯಾಭ್ಯಾಸದ ಖರ್ಚು, ಮನೆಯ ಖರ್ಚು ನೋಡಿಕೊಳ್ಳಬೇಕು ಎನ್ನುತ್ತಾರೆ ಸಂತ್ರಸ್ತ ಮಹಿಳೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಆಕೆಗೆ ಸಹಾಯಹಸ್ತ ಚಾಚಿಲ್ಲ.
2020ರ ಅಕ್ಟೋಬರ್ 26 ರಂದು ಮಹಿಳೆ ಅನಾರೋಗ್ಯವಿದ್ದ ಕಾರಣ ಮಧ್ಯಾಹ್ನ ಊಟದ ನಂತರ ಫ್ಯಾಕ್ಟರಿಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಆ್ಯಸಿಡ್ ದಾಳಿಯಾಗಿತ್ತು. ಇಬ್ಬರು ಮುಸುಕುಧಾರಿ ಯುವಕರು ಬೈಕ್‌ನಲ್ಲಿ ಬಂದು ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದರು. ಇದರಿಂದಾಗಿ ಮಹಿಳೆಯ ಮುಖ ಸಂಪೂರ್ಣ ಸುಟ್ಟು ಹೋಗಿತ್ತು. ಆಕೆಯ ದೃಷ್ಟಿ ಶೇ 90 ರಷ್ಟು ಹಾನಿಯಾಗಿದೆ. ಆ್ಯಸಿಡ್ ದಾಳಿಯ ವಿಡಿಯೋ ಕೂಡ ವೈರಲ್ ಆಗಿತ್ತು. ಎರಡು ವರ್ಷಗಳ ತನಿಖೆಯ ನಂತರ, ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಹೇಳಿ ಪ್ರಕರಣವನ್ನು ಅಂತ್ಯಗೊಳಿಸಿದ್ದರು. ಇಂದಿಗೂ ಆರೋಪಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದೆಹಲಿಯಲ್ಲಿ ಶಾಲಾ ಬಾಲಕಿ ಮೇಲೆ ಆ್ಯಸಿಡ್ ದಾಳಿ: ಓರ್ವನ ಬಂಧನ