ನವದೆಹಲಿ: ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. ಪ್ರತಿ ಕ್ವಿಂಟಲ್ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (Fair and Remunerative Price - FRP)ಯನ್ನು 10 ರೂಪಾಯಿ ಹೆಚ್ಚಳ ಮಾಡಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪಾವತಿಸುವ ಕನಿಷ್ಠ ಬೆಲೆಯನ್ನು 315 ರೂ.ಗೆ ನಿಗದಿ ಮಾಡಿದೆ. ಇದಕ್ಕೆ ಇಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಕ್ಟೋಬರ್‌ನಿಂದ ಪ್ರಾರಂಭವಾಗುವ 2023- 24ರ ಹಂಗಾಮಿಗೆ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಕನಿಷ್ಠ ಬೆಲೆ ಇದಾಗಿದೆ. ಕಬ್ಬಿನ ಎಫ್‌ಆರ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ 10 ರೂಪಾಯಿ ಹೆಚ್ಚಳ ಮಾಡಿದ್ದು, 2022-23ರ ಮಾರುಕಟ್ಟೆ ವರ್ಷಕ್ಕೆ ಹೋಲಿಸಿದರೆ ಶೇ.3.28ರಷ್ಟು ಏರಿಕೆಗೊಂಡಂತೆ ಆಗಿದೆ.
ಸಂಪುಟ ಸಭೆ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, 2023- 24ನೇ ಸಾಲಿನಲ್ಲಿ ಕಬ್ಬಿನ ಎಫ್‌ಆರ್‌ಪಿಯನ್ನು ಕ್ವಿಂಟಲ್‌ಗೆ 315 ರೂ.ಗೆ ಸಚಿವ ಸಂಪುಟ ಹೆಚ್ಚಿಸಿದೆ. ಕಳೆದ ವರ್ಷ ಕಬ್ಬಿನ ಎಫ್‌ಆರ್‌ಪಿ ಪ್ರತಿ ಕ್ವಿಂಟಲ್‌ಗೆ 305 ರೂ. ಇತ್ತು. ಪ್ರಧಾನಿಯವರು ಸದಾ ಅನ್ನದಾತರ ಜೊತೆಗಿದ್ದು, ಸರ್ಕಾರ ಕೃಷಿ ಮತ್ತು ರೈತರಿಗೆ ಆದ್ಯತೆ ನೀಡಿದೆ ಎಂದರು.
2014- 15ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್‌ಗೆ ಕಬ್ಬಿನ ಎಫ್‌ಆರ್‌ಪಿ 210 ರೂ. ಇತ್ತು. ಈಗ 2023-24ನೇ ಸಾಲಿನಲ್ಲಿ ಇದು 315 ರೂ.ಗೆ ತಲುಪಿದೆ. 2013-14ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು 57,104 ಕೋಟಿ ರೂ. ಮೌಲ್ಯದ ಕಬ್ಬು ಖರೀದಿಸಿದ್ದವು. ಪ್ರಸಕ್ತ 2022-23ರ ಮಾರುಕಟ್ಟೆ ವರ್ಷದಲ್ಲಿ 1,11,366 ಕೋಟಿ ರೂಪಾಯಿ ಮೌಲ್ಯದ ಸುಮಾರು 3,353 ಲಕ್ಷ ಟನ್ ಕಬ್ಬನ್ನು ಸಕ್ಕರೆ ಕಾರ್ಖಾನೆಗಳು ಖರೀದಿಸಿವೆ. ಅಲ್ಲದೇ, ಕಬ್ಬಿನ ಹಣದ ಯಾವುದೇ ಬಾಕಿಗಳ ವಿವಾದಗಳು ಇಲ್ಲ. ಮೋದಿ ಸರ್ಕಾರದ ಅಡಿಯಲ್ಲಿ ಕಬ್ಬಿನ ರೈತರಿಂದ ಬಾಕಿ ವಿಷಯವಾಗಿ ಯಾವುದೇ ಪ್ರತಿಭಟನೆಗಳು ನಡೆದಿಲ್ಲ ಎಂದು ಠಾಕೂರ್ ಹೇಳಿದರು.
ಈ ಎಫ್‌ಆರ್‌ಪಿ ನಿರ್ಧಾರವು 5 ಕೋಟಿ ಕಬ್ಬು ಬೆಳೆಗಾರರಿಗೆ ಮತ್ತು ಅವರ ಅವಲಂಬಿತರು ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 5 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ. ಎಥೆನಾಲ್ ಅನ್ನು ಕಚ್ಚಾ ತೈಲದೊಂದಿಗೆ ಬೆರೆಸುವ ಯೋಜನೆಯು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಕಚ್ಚಾ ತೈಲ, ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ ಎಥೆನಾಲ್ ಮಿಶ್ರಣಕ್ಕೆ ಪ್ರಧಾನಿ ಮೋದಿ ಒತ್ತು ನೀಡಿದ್ದಾರೆ. ಇದಕ್ಕಾಗಿ 20,500 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ತೊಗರಿ, ಭತ್ತ, ರಾಗಿ ಸೇರಿದಂತೆ ಮುಂಗಾರು ಹಂಗಾಮಿನ ಬೆಳೆಗಳಿಗೆ MSP ಹೆಚ್ಚಿಸಿದ ಕೇಂದ್ರ ಸರ್ಕಾರ