ನವದೆಹಲಿ: ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು 2 ಲಕ್ಷ ರೂ. ಮತ್ತು ಹೆಚ್ಚಿನ ಮೊತ್ತದ ನಗದು ಪಾವತಿಯನ್ನು ಸ್ವೀಕರಿಸಲು ಕೇಂದ್ರ ಆದಾಯ ತೆರಿಗೆ ಇಲಾಖೆ ಅನುಮತಿ ನೀಡಿದೆ.
2017ರ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯ ನಿರ್ಬಂಧದ ಪ್ರಕಾರ, ಏಕಕಾಲದಲ್ಲಿ ದಾಖಲೆಗಳಿಲ್ಲದೆ ಯಾವುದೇ ವ್ಯಕ್ತಿ, ಆಸ್ಪತ್ರೆ ಅಥವಾ ಸಂಸ್ಥೆಗೆ 2 ಲಕ್ಷ ರೂಪಾಯಿಗಿಂತ ಅಧಿಕ ಹಣವನ್ನು ನಗದು ರೂಪದಲ್ಲಿ ವಹಿವಾಟು ನಡೆಸುವುದನ್ನು ನಿಷೇಧಿಸಲಾಗಿತ್ತು. ಕಪ್ಪು ಹಣವನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಈ ನಿಯಮವನ್ನು ಪರಿಚಯಿಸಿತ್ತು.
ಇದನ್ನೂ ಓದಿ: ವಿಶೇಷ ಲೇಖನ: ಕೋವಿಡ್ ಲಸಿಕೆಗಾಗಿ ಬಜೆಟ್ನಲ್ಲಿ ಮೀಸಲಿಟ್ಟ ಹಣವೆಷ್ಟು? ಖರ್ಚಾಗಿದ್ದೆಷ್ಟು?
ಆದರೆ ದೇಶದಲ್ಲಿ ಕೊರೊನಾ ಉಲ್ಬಣಿಸಿದ್ದು, ಇಂತಹ ತುರ್ತು ಸಮಯದಲ್ಲಿ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗಬಾರದೆಂದು ಸಿಬಿಡಿಟಿ ಈ ನಿರ್ಬಂಧವನ್ನು ಮೇ 31ರವರೆಗೆ ಸಡಿಲಗೊಳಿಸಿದೆ.
ಇದೀಗ ಕೋವಿಡ್ ಕೇರ್ ಸೆಂಟರ್ಗಳು, ಆಸ್ಪತ್ರೆಗಳು, ಮೆಡಿಕಲ್ಗಳು, ನರ್ಸಿಂಗ್ ಹೋಂಗಳಲ್ಲಿ ರೋಗಿ ಅಥವಾ ಅವರ ರೋಗಿಗಳ ಕುಟುಂಬಸ್ಥರು ಸೋಂಕಿತನ ಆಧಾರ್ ಅಥವಾ ಪಾನ್ ಕಾರ್ಡ್ ತೋರಿಸಿ ಎರಡು 2 ಲಕ್ಷ ರೂ. ಮತ್ತು ಹೆಚ್ಚಿನ ಹಣವನ್ನು ಪಾವತಿಸಬಹುದಾಗಿದೆ ಎಂದು ಸಿಬಿಡಿಟಿ ಅಧಿಸೂಚನೆಯನ್ನು ಹೊರಡಿಸಿದೆ.