ಕೋಲ್ಕತ್ತಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳದ ಸರ್ಕಾರ ಮತ್ತು ರಾಜಭವನ ನಡುವಿನ ಸಂಘರ್ಷ ಅಪರೂಪವೇನಲ್ಲ. ಕೇಂದ್ರ ಸರ್ಕಾರ ರಾಜ್ಯಪಾಲರ ಹುದ್ದೆಯನ್ನು ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂಬುದೇ ಸರ್ಕಾರದ ಪ್ರಮುಖ ಆರೋಪ.
ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಏರ್ಪಟ್ಟಿದೆ. ಇದರ ನಡುವೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಮಮತಾ ಬ್ಯಾನರ್ಜಿ ಬುಧವಾರ ಸಂಜೆ ದೂರವಾಣಿ ಮೂಲಕ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಟಾಲಿನ್ ಬಿಜೆಪಿ ವಿರುದ್ಧ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಒಗ್ಗಟ್ಟಿನಿಂದ ಹೋರಾಡುವಂತೆ ಕರೆ ನೀಡಿದ್ದಾರೆ.
ಅಲ್ಲದೇ, ಮಮತಾ ಬ್ಯಾನರ್ಜಿ ಅವರೊಂದಿಗಿನ ಮಾತುಕತೆ ಬಗ್ಗೆ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ. ''ಬಿಜೆಪಿಯೇತರ ಆಡಳಿತದ ರಾಜ್ಯಗಳಲ್ಲಿ ರಾಜ್ಯಪಾಲರ ಪ್ರಜಾಪ್ರಭುತ್ವ ವಿರೋಧಿ ಕಾರ್ಯ ನಿರ್ವಹಣೆ ಆಗುತ್ತಿದೆ. ಇದರ ವಿರುದ್ಧ ತಮ್ಮ ಒಗ್ಗೂಡಲು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಮುಂದಿನ ನಡೆ ಬಗ್ಗೆ ಎಲ್ಲ ಪ್ರತಿಪಕ್ಷಗಳ ಸಿಎಂಗಳು ಸಭೆ ಸೇರಿ ನಿರ್ಧರಿಸಲಾಗಿದೆ'' ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಮತ್ತೊಂದೆಡೆ, ರಾಜ್ಯಪಾಲರಿಗೆ ಕಳುಹಿಸಿದ ಮಸೂದೆಗಳ ಅನುಮೋದನೆಗೆ ಗಡುವನ್ನು ನಿಗದಿಪಡಿಸುವ ನಿರ್ಣಯವನ್ನು ಇತ್ತೀಚೆಗೆ ತಮಿಳುನಾಡು ವಿಧಾನಸಭೆಯಲ್ಲಿ ಸ್ಟಾಲಿನ್ ಸರ್ಕಾರ ಮಂಡಿಸಿದೆ. ರಾಜ್ಯಪಾಲರ ವಿರುದ್ಧ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಸ್ಟಾಲಿನ್ ಪತ್ರ ಬರೆದು ತಮ್ಮ ರಾಜ್ಯಗಳಲ್ಲಿ ಇದೇ ರೀತಿಯ ನಿರ್ಣಯಗಳನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಮುಂದಿನ ವಿಧಾನಸಭೆಯಲ್ಲಿ ಈ ಬಗ್ಗೆ ಮಸೂದೆಯನ್ನು ತರುವುದಾಗಿ ಭರವಸೆ ನೀಡಿದ್ದಾರೆ.
ಆದರೆ, ಸ್ಟಾಲಿನ್ ಹೇಳಿಕೆಗೆ ಮಮತಾ ಬ್ಯಾನರ್ಜಿ ಯಾವ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂಬುವುದು ಅಧಿಕೃತವಾಗಿ ಹೇಳಿಕೆ ಹೊರ ಬಂದಿಲ್ಲ. ಈ ಕುರಿತು ಪ್ರತಿಪಕ್ಷಗಳ ಮುಖ್ಯಮಂತ್ರಿಗಳ ಸಭೆ ಕರೆದು ಮುಂದಿನ ನಡೆ ಬಗ್ಗೆ ಸಭೆಯಲ್ಲಿಯೇ ತೀರ್ಮಾನಿಸುವಂತೆ ಮಮತಾ ಸಲಹೆ ನೀಡಿದ್ದಾರೆ ಎಂದಷ್ಟೇ ತಿಳಿದುಬಂದಿದೆ.
ಇದನ್ನೂ ಓದಿ: ರಾಜ್ಯಪಾಲ v/s ಸರ್ಕಾರ: ತಮಿಳುನಾಡು ಗವರ್ನರ್ ವಿರುದ್ಧ ಸಿಎಂ ಸ್ಟಾಲಿನ್ ಮತ್ತೊಂದು ನಿರ್ಣಯ