ಮೀರತ್(ಉತ್ತರ ಪ್ರದೇಶ): 'ಕೇಂದ್ರ ಸರ್ಕಾರ ನನ್ನನ್ನು ಕೊಲ್ಲಲು' ಬಯಸಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಹೇಳಿಕೊಂಡಿದ್ದಾರೆ. ಕರ್ನಾಟಕ ಮತ್ತು ದೆಹಲಿಯಲ್ಲಿ ನಡೆದ ದಾಳಿಗಳು ಇದಕ್ಕೆ ಸೂಕ್ತ ಪುರಾವೆಗಳು ಎಂದು ಅವರು ಆರೋಪ ಮಾಡಿದ್ದಾರೆ.
ಮೀರತ್ನ ಕಂಕೇರ್ ಖೇರಾದಲ್ಲಿ ನಡೆದ ಕಿಸಾನ್ ಪಂಚಾಯತ್ ಕಾರ್ಯಕ್ರಮದಲ್ಲಿ ರೈತರು ಮತ್ತು ಒಕ್ಕೂಟದ ಸದ್ಯಸರನ್ನುದ್ದೇಶಿಸಿ ರಾಕೇಶ್ ಟಿಕಾಯತ್ ಮಾತನಾಡಿದರು. ಇತ್ತೀಚೆಗೆ ಕರ್ನಾಟಕದಲ್ಲಿ ನನ್ನ ಮೇಲೆ ನಡೆದ ಹಲ್ಲೆ ಮತ್ತು ಮಸಿ ಬಳಿದಿರುವ ಪ್ರಕರಣ ಯೋಜಿತ ಸಂಚು ಎಂದು ಆರೋಪ ಮಾಡಿದ್ದಾರೆ. ಈ ಹಿಂದೆ ದೆಹಲಿಯಲ್ಲಿರುವ ದಿವಂಗತ ಬಿಪಿನ್ ರಾವತ್ ನಿವಾಸಕ್ಕೆ ಭೇಟಿ ನೀಡಲು ತೆರಳಿದ್ದ ವೇಳೆ ಕೂಡ ನನ್ನನ್ನ ಕೊಲೆ ಮಾಡುವ ಸಂಚು ರೂಪಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಟಿಕಾಯತ್ ಮುಖಕ್ಕೆ ಮಸಿ ಬಳಿದ ಪ್ರಕರಣ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ರೈತ ನಾಯಕರ ಆಗ್ರಹ
ರೈತ ಸಂಘಟನೆ ವಿಸರ್ಜನೆ ಮಾಡಲು ಸರ್ಕಾರ ವಿಧ್ವಂಸಕ ರಾಜಕಾರಣ ಮಾಡ್ತಿದೆ. ಟಿಕಾಯತ್ ಕುಟುಂಬ ಯಾವಾಗಲೂ ರೈತರ ಧ್ವನಿಯಾಗಿದ್ದು, ಅದು ಮುಂದುವರೆಯಲಿದೆ ಎಂದರು. ಇದೇ ವೇಳೆ ಮಾತನಾಡಿರುವ ಬಾಬಾ ಮಹೇಂದ್ರ ಸಿಂಗ್ ಟಿಕಾಯತ್, ಟಿಕಾಯತ್ ಕುಟುಂಬ ಯಾವುದೇ ರೀತಿಯ ಒತ್ತಡಕ್ಕೂ ಮಣಿಯುವುದಿಲ್ಲ. ಚುನಾವಣೆಗೂ ಮುನ್ನ ಉತ್ತರ ಪ್ರದೇಶ ಸರಕಾರ ನೀರಾವರಿಗೋಸ್ಕರ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಈಗ ಕೊಳವೆ ಬಾವಿಗಳಿಗೆ ಮೀಟರ್ ಅಳವಡಿಸಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದರು.
ಕಳೆದ ಮೇ 30ರಂದು ಕರ್ನಾಟಕಕ್ಕೆ ಆಗಮಿಸಿದ್ದ ರೈತ ಮುಖಂಡ ರಾಕೇಶ್ ಟಿಕಾಯತ್ ಸುದ್ದಿಗೋಷ್ಠಿ ವೇಳೆ ಅವರ ಮೇಲೆ ಹಲ್ಲೆ ನಡೆಸಿ, ಮಸಿ ಎರಚುವ ಕೆಲಸ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.