ಚೆನ್ನೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾರ್ಜಾದಿಂದ ಬಂದ ಪ್ರಯಾಣಿಕರೊಬ್ಬರಿಂದ 1.18 ಕೋಟಿ ಮೌಲ್ಯದ ದಾಖಲೆರಹಿತ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಸ್ಟಮ್ಸ್ ಆಯುಕ್ತರ ಕಚೇರಿ ಪ್ರಕಾರ, ಮಂಗಳೂರಿನ ಮೊಹಮ್ಮದ್ ಅರಾಫತ್ (24), ಶಾರ್ಜಾದಿಂದ ಏರ್ ಅರೇಬಿಯಾ ವಿಮಾನದಲ್ಲಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅನುಮಾನಾಸ್ಪದವಾಗಿ ಕಂಡ ಹಿನ್ನೆಲೆ ನಿರ್ಗಮನ ಹಂತದ ವೇಳೆ ಅಧಿಕಾರಿಗಳು ತಡೆದು ಪರಿಶೀಲಿಸಿದಾಗ ಚಿನ್ನ ಕಳ್ಳಸಾಗಣೆಯಾಗುತ್ತಿದ್ದದ್ದು ಕಂಡು ಬಂದಿದೆ.
ಅವರ ಚೆಕ್-ಇನ್-ಬ್ಯಾಗೇಜ್ ಬಾಕ್ಸ್ ಅನ್ನು ಪರಿಶೀಲಿಸಿದಾಗ ಭಾರಿ ತೂಕ್ ರೀಚಾರ್ಜ್ಬೆಲ್ ಟಾರ್ಚ್ ಕಂಡು ಬಂದಿದೆ. ಅದನ್ನು ಮುರಿದು ನೋಡಿದಾಗ ಒಳಗೆ ಕಪ್ಪು ಬಣ್ಣದ ಬ್ಯಾಟರಿ ಕಂಡುಬಂದಿದೆ. ಆ ಬ್ಯಾಟರಿ ಒಳಗೆ, ಬೆಳ್ಳಿ ಲೇಪನ ಹೊಂದಿರುವ ಚಿನ್ನ ಕಂಡು ಬಂದಿದೆ. ಬೆಳ್ಳಿ ಲೇಪನವನ್ನು ತೆಗೆದಾಗ 2.39 ಕೆಜಿ 24 ಕ್ಯಾರೆಟ್ ಶುದ್ಧತೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಕಸ್ಟಮ್ಸ್ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ ಮತ್ತು ಇದರ ಮೌಲ್ಯ ರೂ .1.18 ಕೋಟಿ ರೂ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗ್ತಿದೆ.