ಉತ್ತರ ಪ್ರದೇಶ: ಜೌನ್‌ಪುರ ಜಿಲ್ಲೆಯ ನಿವಾಸಿಯೊಬ್ಬರ ಮನೆಯೊಳಗೆ ಶೌಚಾಲಯದ ಗುಂಡಿ ಅಗೆಯುವಾಗ ಬ್ರಿಟಿಷರ ಕಾಲದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಾರ ಘಟನೆ ನಡೆದಿದೆ. ನಾಣ್ಯ ಸಿಕ್ಕಿರುವ ಕುರಿತು ನೂರ್ ಜಹಾನ್ ಕುಟುಂಬಸ್ಥರು ಹಾಗು ಕೂಲಿ ಕಾರ್ಮಿಕರು ಯಾರಿಗೂ ವಿಷಯ ತಿಳಿಸಿರಲಿಲ್ಲ. ವಾರಾಂತ್ಯದಲ್ಲಿ ಮಾಹಿತಿ ಪಡೆದ ಪೊಲೀಸರು ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಎಲ್ಲಾ ನಾಣ್ಯಗಳು (1889-1912) ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿವೆ. ಈ ಕುರಿತು ಪೊಲೀಸರು ಕಾರ್ಮಿಕರನ್ನು ವಿಚಾರಣೆಗೆ ಕರೆದು ತನಿಖೆ ನಡೆಸುತ್ತಿದ್ದಾರೆ. ಕೆಲ ಕಾರ್ಮಿಕರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಮಾಮ್ ಅಲಿ ರೈನಿ ಅವರ ಪತ್ನಿ ನೂರ್ ಜಹಾನ್ ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಗುಂಡಿ ತೋಡಿಸುತ್ತಿದ್ದರು. ಈ ಸಂದರ್ಭದಲ್ಲಿ ತಾಮ್ರದ ಪಾತ್ರೆಯಲ್ಲಿ ಚಿನ್ನದ ನಾಣ್ಯಗಳು ದೊರೆತಿವೆ. ಬಳಿಕ ಕಾರ್ಮಿಕರು ತಮ್ಮ ತಮ್ಮಲ್ಲೇ ಜಗಳ ಮಾಡಿಕೊಂಡು ಮಧ್ಯದಲ್ಲೇ ಕೆಲಸ ಬಿಟ್ಟು ಹೋಗಿದ್ದಾರೆ. ಮರುದಿನ ಮತ್ತೆ ಬಂದ ಕೂಲಿಕಾರರು ಜಾಗ ಅಗೆಯಲು ಪ್ರಾರಂಭಿಸಿದ್ದು, ಈ ವೇಳೆ ಓರ್ವ ಕಾರ್ಮಿಕ ರೈನಿ ಮಗನಿಗೆ ಒಂದು ನಾಣ್ಯವನ್ನು ನೀಡಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕೆ ಇನ್ಸ್ಪೆಕ್ಟರ್ ಆಗಮಿಸಿ ತನಿಖೆ ಆರಂಭಿಸಿದಾಗ, ಕಾರ್ಮಿಕರು ಮೊದಲಿಗೆ ಅಂತಹ ಯಾವುದೇ ನಾಣ್ಯ ಪತ್ತೆಯಾಗಿಲ್ಲ ಎಂದು ಸತ್ಯ ಸಂಗತಿ ತಿಳಿಸಲು ನಿರಾಕರಿಸಿದ್ದಾರೆ. ಪೊಲೀಸರು ಅನುಮಾನ ಮೂಡಿ ತನಿಖೆ ತೀವ್ರಗೊಳಿಸಿದಾಗ ನಾಣ್ಯಗಳು ಪತ್ತೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಒಟ್ಟು 10 ಚಿನ್ನದ ನಾಣ್ಯಗಳನ್ನು ಕಾರ್ಮಿಕರು ಪೊಲೀಸರಿಗೆ ಹಿಂತಿರುಗಿಸಿದ್ದಾರೆ. ಆದ್ರೆ, ತಾಮ್ರದ ಪಾತ್ರೆಯಲ್ಲಿ ಮೂಲತಃ ಎಷ್ಟು ನಾಣ್ಯಗಳಿದ್ದವು ಎಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಎಲ್ಲಾ 10 ನಾಣ್ಯಗಳನ್ನು ಸರ್ಕಾರದ ಖಜಾನೆಗೆ ಜಮಾ ಮಾಡಲಾಗಿದೆ.
ಇದನ್ನೂ ಓದಿ: ಉಳುಮೆ ಮಾಡುವಾಗ ನಿಧಿ ಪತ್ತೆ: ಕದ್ದು ಪರಾರಿಯಾದ ಟ್ರ್ಯಾಕ್ಟರ್ ಕಾರ್ಮಿಕರು