ಹೈದರಾಬಾದ್: ಆಕ್ಸ್‌ಫರ್ಡ್‌ನ ಆರ್ಥಿಕ ಪುನಶ್ಚೇತನ ಯೋಜನೆ ಮತ್ತು ಯುಎನ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (ಯುಎನ್‌ಇಪಿ) ವಿಶ್ಲೇಷಣೆಯ ಪ್ರಕಾರ, ಜಾಗತಿಕವಾಗಿ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಪರಿಣಾಮವನ್ನು ನಿಭಾಯಿಸುವಲ್ಲಿ ಸುಮಾರು 50 ದೇಶಗಳು ಘೋಷಿಸಿರುವ ಚೇತರಿಕೆ ಖರ್ಚಿನ ಶೇ.18 ರಷ್ಟು ಮಾತ್ರ ಹಸಿರನ್ನು ಸಂರಕ್ಷಿಸಲು ವಿನಿಯೋಗಿಸಲಾಗಿದೆ.
ಹಸಿರಿನ ಸಂರಕ್ಷಣೆಗೆ ಘೋಷಿಸಿದ್ದ ಒಟ್ಟು 14.6 ಟ್ರಿಲಿಯನ್ ಡಾಲರ್ ಹಣದಲ್ಲಿ ಕೇವಲ 368 ಬಿಲಿಯನ್ ಹಣವನ್ನು ಖರ್ಚು ಮಾಡಲಾಗಿದ್ದು, ಇದು ಸುಸ್ಥಿರ ಅಭಿವೃದ್ದಿಗೆ ಮಾರಕವಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.
ಸ್ಪ್ಯಾನಿಷ್ ಮತ್ತು ಜರ್ಮನ್ ದೇಶಗಳು ನವೀಕರಿಸಬಹುದಾದ ಇಂಧನ ಯೋಜನೆಗಳು ಮತ್ತು ಹೈಡ್ರೋಜನ್ ಮತ್ತು ಮೂಲಸೌಕರ್ಯಗಳ ಮೇಲೆ ಕೇವಲ 66.1 ಬಿಲಿಯನ್ ಡಾಲರ್ ಹೂಡಿಕೆ ಮಾಡಿರುವುದರಿಂದ ಇದು ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ವಿಫಲವಾಗಿದೆ ಎಂದಿದೆ.
ಸ್ಪೇನ್ ಸರ್ಕಾರವು ‘ಹೆಚ್ಚು ಅಂತರ್ಗತ ಶಕ್ತಿ’ ಪರಿವರ್ತನೆಗಾಗಿ 7.2 ಬಿಲಿಯನ್ ಡಾಲರ್ ನಿಗದಿಪಡಿಸಿದೆ. ದಕ್ಷಿಣ ಕೊರಿಯಾವು ಪ್ರಬಲ ಜಾಗತಿಕ ಹಸಿರು ಚೇತರಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಹಸಿರು ಸಂರಕ್ಷಣೆಯ ಹೂಡಿಕೆಗಾಗಿ 53.6 ಶತಕೋಟಿ ಹಣವನ್ನು ಮೀಸಲಿಟ್ಟಿದೆ.
ಹಸಿರು ಸಂರಕ್ಷಣೆಯ ಪ್ರೋತ್ಸಾಹದಾಯಕ ಕ್ರಮಗಳಾದ ಎಲೆಕ್ಟ್ರಿಕ್ ವಾಹನಕ್ಕೆ ಉತ್ತೇಜನೆ ಮತ್ತು ಸಬ್ಸಿಡಿ, ಸೈಕ್ಲಿಂಗ್ ಮತ್ತು ವಾಕಿಂಗ್ ಮೂಲಸೌಕರ್ಯಗಳಿಗಾಗಿ ಕೇವಲ 86.1 ಬಿಲಿಯನ್ ಡಾಲರ್ ಹಣವನ್ನು ನಿಗದಿಪಡಿಸಿದೆ.
ವರದಿಯ ಇತರ ಆವಿಷ್ಕಾರಗಳೆಂದರೆ:
- ಮುಖ್ಯವಾಗಿ ಫ್ರಾನ್ಸ್ ಮತ್ತು ಯುಕೆಗಳಲ್ಲಿ ಇಂಧನ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಸಿರು ಸಂರಕ್ಷಣೆಯ ಉತ್ತೇಜನಕ್ಕಾಗಿ ಸುಮಾರು 35.2 ಬಿಲಿಯನ್ ಡಾಲರ್ ಹಣವನ್ನು ನಿಗದಿಪಡಿಸಲಾಗಿದೆ.
- ಯುಎಸ್ ಮತ್ತು ಚೀನಾ ದೇಶಗಳು ಬಹುಮುಖ್ಯವಾಗಿ ಅರಣ್ಯನಾಶ ಹಾಗೂ ಅದರ ಪುನರುತ್ಪಾದನೆ ಉಪಕ್ರಮಗಳ ಮೇಲೆ ಸುಮಾರು 56.3 ಬಿಲಿಯನ್ ಡಾಲರ್ ಹಣವನ್ನು ವಿನಿಯೋಗಿಸಿದ್ದು, ಇದರ ಐದನೇ ಒಂದು ಭಾಗದಷ್ಟು ಹಣವನ್ನು ಸಾರ್ವಜನಿಕ ಉದ್ಯಾನವನಗಳು ಮತ್ತು ಪ್ರತಿರೋಧಕ ಮಾಲಿನ್ಯ ಕ್ರಮಗಳಿಗಾಗಿ ನಿಗದಿಪಡಿಸಲಾಗಿದೆ.
- ಮರ ನೆಡುವಿಕೆ ಮತ್ತು ಜೀವವೈವಿಧ್ಯ ಸಂರಕ್ಷಣೆಗಾಗಿ ( 13.1 ಬಿಲಿಯನ್ ಡಾಲರ್) ಹಾಗೂ ಪರಿಸರ ಸಂರಕ್ಷಣಾ ಉಪಕ್ರಮಗಳಿಗಾಗಿ ( 5.3 ಬಿಲಿಯನ್) ಗಮನಾರ್ಹ ಹೂಡಿಕೆಯನ್ನು ನಿಗದಿಪಡಿಸಿದೆ.
- ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 800,000 ಮರಗಳನ್ನು ನೆಡಲು ಸುಮಾರು 54.9 ಮಿಲಿಯನ್ ಡಾಲರ್ ಹಣವನ್ನು ಯುನೈಟೆಡ್ ಕಿಂಗ್‌ಡಂ ವಿನಿಯೋಗಿಸಿದೆ.
ಮಾನವ ಜನಾಂಗವು ಕೋವಿಡ್ ಪಿಡುಗು, ಆರ್ಥಿಕ ಬಿಕ್ಕಟ್ಟು ಮತ್ತು ಗಂಭೀರ ಪರಿಸರ ಸಮಸ್ಯೆಯನ್ನು ಎದುರಿಸುತ್ತಿದ್ದು, ಆರ್ಥಿಕ ಅವಕಾಶಗಳು, ಬಡತನ ನಿವಾರಣೆ ಮತ್ತು ಭೂಮಿಯ ಆರೋಗ್ಯಕ್ಕೆ ಆದ್ಯತೆ ನೀಡುವ ಮೂಲಕ ಸುಸ್ಥಿರ ಅಭಿವೃದ್ದಿಯನ್ನು ಕಾಪಾಡುವಲ್ಲಿ ಸರ್ಕಾರಗಳಿಗೆ ಒಂದು ಅನನ್ಯ ಅವಕಾಶವಿದೆ ಎಂದು ಯುಎನ್‌ಇಪಿ ಕಾರ್ಯನಿರ್ವಾಹಕ ನಿರ್ದೇಶಕ ಇಂಗರ್ ಆಂಡರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಗ್ಲೋಬಲ್ ರಿಕವರಿ ಅಬ್ಸರ್ವೇಟರಿಯ ವರದಿಯು, ನಾವು ಇಂಗಾಲದ ನಿರ್ವಹಣೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿಲ್ಲ ಎಂಬುದನ್ನು ಸೂಚಿಸುತ್ತದೆ. ಹಸಿರಿನ ಪುನಶ್ಚೇತನವೇ ಆರ್ಥಿಕತೆಯ ಅಭಿವೃದ್ದಿಯೆಂಬುದು ನಮಗೆಲ್ಲರಿಗೂ ತಿಳಿದಿದ್ದು, ನಾವದನ್ನು ಸಾಧಿಸಲೇಬೇಕು ಎಂದು ಆಕ್ಸ್‌ಫರ್ಡ್‌ನ ಪರಿಸರ ಅರ್ಥಶಾಸ್ತ್ರದ ಪ್ರಾಧ್ಯಾಪಕ, ಕ್ಯಾಮರೂನ್ ಹೆಪ್ಬರ್ನ್ ಕರೆ ನೀಡಿದ್ದಾರೆ.