ಮಧುರೈ(ತಮಿಳುನಾಡು): ಸಿಬಿಐ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರ ಅಗತ್ಯ ಕಾನೂನು ರೂಪಿಸಬೇಕು. ಕೇಂದ್ರೀಯ ತನಿಖಾ ದಳ ಭಾರತದ ಚುನಾವಣಾ ಆಯೋಗ ಹಾಗೂ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಹೇಳಿದೆ.
ರಾಮನಾಥಪುರಂ ಜಿಲ್ಲೆಯಲ್ಲಿ 300 ಕೋಟಿ ಹಗರಣ ಪ್ರಕರಣದಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎನ್.ಕಿರುಪಾಕರನ್ ಮತ್ತು ಪಿ.ಪುಗಳಂದಿ ನೇತೃತ್ವದ ದ್ವಿಸದಸ್ಯ ಪೀಠ ನಡೆಸಿತು. ಈ ವೇಳೆ ಸಿಬಿಐಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಬೇಕು ಎಂಬುದನ್ನು ಕೋರ್ಟ್ ಒತ್ತಿ ಹೇಳಿದೆ.
ಅಮೆರಿಕದಲ್ಲಿ ಎಫ್‌ಬಿಐ ಮತ್ತು ಯುಕೆಯಲ್ಲಿರುವ ಸ್ಕಾಟ್ಲೆಂಡ್ ಯಾರ್ಡ್ ಗಾರ್ಡ್ ನಂತಹ ಆಧುನಿಕ ಹಾಗೂ ತಂತ್ರಜ್ಞಾನದ ಸೌಲಭ್ಯಗಳನ್ನು ಸಿಬಿಐಗೂ ಒದಗಿಸಬೇಕು ಎಂದು ಸೂಚಿಸಿದೆ. ಸೈಬರ್ ಅಪರಾಧ, ವಿಧಿವಿಜ್ಞಾನ ಹಾಗೂ ಹಣಕಾಸು ಲೆಕ್ಕಪರಿಶೋಧನೆ ವಿಭಾಗದಲ್ಲಿ ತಜ್ಞರ ನೇಮಕಾತಿಯ ಕುರಿತು ನೀತಿ ನಿರ್ಧಾರಗಳನ್ನು ಕೈಗೊಳ್ಳುವ ಬಗ್ಗೆ ಆರು ವಾರಗಳಲ್ಲಿ ತಿಳಿಸಬೇಕೆಂದು ಹೇಳಿದೆ.
ಸಿಬಿಐಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ವಸತಿ ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಆರು ವಾರಗಳಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ತನಿಖಾ ಏಜೆನ್ಸಿಗೆ ಪ್ರತ್ಯೇಕ ಬಜೆಟ್ ಹಂಚಿಕೆಗೂ ಕೋರ್ಟ್ ಬೇಡಿಕೆ ಇಟ್ಟಿರುವುದು ಗಮನಾರ್ಹವಾಗಿದೆ.