ವಾಷಿಂಗ್ಟನ್(ಅಮೆರಿಕ): ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿರುವ, ಮೈಸೂರು ಮೂಲದವರಾದ ಗೀತಾ ಗೋಪಿನಾಥ್ ಅವರಿಗೆ ಐಎಂಎಫ್‌ನ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ನೀಡಲಾಗುತ್ತಿದೆ ಎಂದು ಐಎಂಎಫ್ ಗುರುವಾರ ಪ್ರಕಟಿಸಿದೆ.
ಈಗಾಗಲೇ ಮೂರು ವರ್ಷ ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿರುವ ಗೀತಾ ಗೋಪಿನಾಥನ್ ಮುಂದಿನ ವರ್ಷದ ಆರಂಭದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜೆಫ್ರಿ ಒಕಾಮೊಟೊ ಅವರು ತೊರೆಯಲಿರುವ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಗೀತಾ ಗೋಪಿನಾಥನ್ ಸೇರ್ಪಡೆಯಾಗಲಿದ್ದಾರೆ. ಒಂದು ವೇಳೆ ಅವರು ಈ ಹುದ್ದೆಗೆ ಆಯ್ಕೆಯಾಗದಿದ್ದರೆ, ಜನವರಿಯಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸೇವೆಗೆ ಸೇರ್ಪಡೆಯಾಗಲು ಚಿಂತನೆ ನಡೆಸಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ, 'ಜೆಫ್ರಿ ಮತ್ತು ಗೀತಾ ಇಬ್ಬರೂ ನನಗೆ ಒಳ್ಳೆಯ ಸಹೋದ್ಯೋಗಿಗಳು. ಜೆಫ್ರಿ ಹುದ್ದೆ ತೊರೆಯುತ್ತಿರುವುದಕ್ಕೆ ಬೇಸರವಾಗುತ್ತಿದೆ. ಗೀತಾ ಹೊಸ ಜವಾಬ್ದಾರಿಯನ್ನು ಸ್ವೀಕರಿಸಲು ನಿರ್ಧರಿಸಿದ್ದಾರೆ ಎಂಬುದು ನನಗೆ ಸಂತೋಷ ತಂದಿದೆ' ಎಂದರು.
ಗೀತಾ ಕೊಡುಗೆಗೆ ಮೆಚ್ಚುಗೆ
ಗೀತಾ ಗೋಪಿನಾಥ್ ಅವರ ಕೆಲಸವನ್ನು ಶ್ಲಾಘಿಸಿರುವ ಕ್ರಿಸ್ಟಲಿನಾ ಜಾರ್ಜಿವಾ, ಐಎಂಎಫ್ಗೆ ಅವರ ಕೊಡುಗೆ ಅಸಾಧಾರಣವಾಗಿದೆ. ಜಾಗತಿಕ ಆರ್ಥಿಕತೆಗೆ ಮತ್ತು ಐಎಂಎಫ್ಗೆ ಸಹಾಯ ಮಾಡಲು ಗೀತಾ ಅವರ ಬೌದ್ಧಿಕ ನಾಯಕತ್ವವು ಸಹಕಾರ ನೀಡಿದೆ. ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ತಿರುವುಗಳಲ್ಲಿ ಅವರು ಅದ್ಭುತವಾಗಿ ಶ್ರಮವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತಿಹಾಸದಲ್ಲಿ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದ ಗೀತಾ ಗೋಪಿನಾಥ್ ಅವರು ಐಎಂಎಫ್‌ನ ಸದಸ್ಯ ರಾಷ್ಟ್ರಗಳಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ ಮತ್ತು ಕಠಿಣವಾದ ಕೆಲಸವನ್ನು ಮುನ್ನಡೆಸಿ, ಯಶಸ್ವಿಗೊಳಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.
'ಪ್ರತಿಭಾವಂತರೊಂದಿಗೆ ಕೆಲಸ ಮಾಡುವುದು ಒಳ್ಳೆಯ ಅವಕಾಶ'
ಹೊಸ ಜವಾಬ್ದಾರಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗೀತಾ ಗೋಪಿನಾಥ್, 'ನನಗೆ ಹೊಸ ಅವಕಾಶ ನೀಡಿದ್ದಕ್ಕಾಗಿ ಕ್ರಿಸ್ಟಲಿನಾ ಜಾರ್ಜಿವಾ ಮತ್ತು ಮಂಡಳಿಗೆ ಕೃತಜ್ಞಳಾಗಿರುತ್ತೇನೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಅತ್ಯಂತ ಪ್ರತಿಭಾವಂತ ಸಹೋದ್ಯೋಗಿಗಳಿದ್ದಾರೆ. ಅವರೊಂದಿಗೆ ಕೆಲಸ ಮಾಡುವುದು ನನಗೆ ಸಿಕ್ಕ ಒಳ್ಳೆಯ ಅವಕಾಶ' ಎಂದಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ ದ್ವಿತೀಯಾರ್ಧದಲ್ಲಿ ಭಾರತ - ಚೀನಾ 14ನೇ ಸುತ್ತಿನ ಮಾತುಕತೆ..!