ಅಲಿಗಢ: ನಿಜವಾದ ಪ್ರೀತಿಗೆ ಕೊನೆಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಪ್ರೀತಿಯೆಂದರೆ ಟೈಂಪಾಸ್ ಎಂದುಕೊಳ್ಳುವ ಪ್ರಸ್ತುತ ಕಾಲಮಾನದಲ್ಲಿ ಯುವತಿಯೊಬ್ಬಳು ತನ್ನ ಪ್ರೀತಿ ಕಾಪಾಡಿಕೊಳ್ಳಲು ವಯಸ್ಸಿಗಾಗಿ ಕಾದು, ಬಳಿಕ ನ್ಯಾಯಾಂಗದ ಮುಖೇನ ಮದುವೆಯಾದ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಖುಷಿ ಮತ್ತು ವರುಣ್ ಎಂಬ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಆಕೆ ಅಪ್ರಾಪ್ತೆ, ಆತ ಯುವಕ. ಈ ಜೋಡಿ ತಮ್ಮ ಕುಟುಂಬಸ್ಥರು ಪ್ರೀತಿಗೆ ಒಪ್ಪಿಗೆ ಸೂಚಿಸುವುದಿಲ್ಲ ಎಂದು ಭಾವಿಸಿ ಮನೆ ಬಿಟ್ಟು ಪರಾರಿಯಾಗಿದ್ದರು. ಆದರೆ, ಇವರ ಪ್ರೀತಿ ವಿಚಾರ ತಿಳಿದ ಬಾಲಕಿಯ ಮನೆಯವರು ಯುವಕನ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ದೂರು ನೀಡಿದ್ದರು. ಬಳಿಕ ಪೊಲೀಸರು ಬಂಧಿಸಿ ಆತನನ್ನು ಜೈಲಿಗೆ ಕಳುಹಿಸಿದ್ದರು.
ಅಷ್ಟೇ ಅಲ್ಲದೆ, ವರುಣ್ ಜೊತೆ ಸಂಪರ್ಕ ಇಟ್ಟುಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕೆಯ ತಂದೆ ಬೆದರಿಕೆ ಹಾಕಿದ್ದರು. ಘಟನೆಯಿಂದ ನೊಂದ ಬಾಲಕಿ ಸುಮಾರು 3 ವರ್ಷಗಳ ಕಾಲ ಮೌನವಹಿಸಿದ್ದಳು. ಇನ್ನು ಆಕೆ ತನ್ನ ಪ್ರೇಮ ಉಳಿಸಿಕೊಳ್ಳಲು 18 ವರ್ಷ ತುಂಬುವವರೆಗೆ (3 ವರ್ಷಗಳ ಕಾಲ) ಕಾದಿದ್ದಾಳೆ.
ಮಾರ್ಚ್ 31ರಂದು ಖುಷಿಗೆ 18 ವರ್ಷ ಪೂರ್ಣಗೊಂಡಿದೆ. ವಯಸ್ಸು ತುಂಬಲು ಕಾಯುತ್ತಿದ್ದ ಆಕೆ ಮಹಿಳಾ ಆಯೋಗದ ಸಹಾಯದಿಂದ ನ್ಯಾಯಾಲಯದ ಮೆಟ್ಟಿಲೇರಿ, ಪ್ರೇಮಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ನಡೆದ ಘಟನೆಯನ್ನು ಇಂಚಿಂಚಾಗಿ ವಿವರಿಸಿದ್ದಾಳೆ.
ಇದಾದ ಬಳಿಕ ಪ್ರಕರಣ ಆಲಿಸಿದ ಪೀಠ, ಪ್ರಕರಣವನ್ನು ಹಿಂತೆಗೆದುಕೊಂಡು ವಿವಾಹವಾಗಲು ಅನುಮತಿ ನೀಡಿದೆ. ಹೀಗಾಗಿ ಖುಷಿ ಮತ್ತು ವರುಣ್ ಕುಟುಂಬದ ಸದಸ್ಯರ ವಿರೋಧದ ನಡುವೆಯೂ ಸಮೀಪವಿರುವ ಶ್ರೀ ವರ್ಷನಿ ದೇವಸ್ಥಾನಕ್ಕೆ ತೆರಳಿ ಹಿಂದೂ ಪದ್ಧತಿಗಳ ಪ್ರಕಾರ ಮದುವೆಯಾಗಿದ್ದಾರೆ.