ಪೂರ್ಣಿಯಾ (ಬಿಹಾರ): ಬಿಹಾರದ ಪೂರ್ಣಿಯಾ ಜಿಲ್ಲೆಯ ಹಳ್ಳಿವೊಂದರಲ್ಲಿ ನಡೆಯುವ ಜಾತ್ರೆಯೊಂದು ವಿಶಿಷ್ಟವಾಗಿದ್ದು, ಇಲ್ಲಿ ಯುವಕ-ಯುವತಿಯರಿಗೆ ತಮ್ಮ ಬಾಳಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ಇರುತ್ತದೆ. 'ಪೂರ್ಣಿಯಾ ಕಾ ಪಟ್ಟ ಮೇಳ' ಎಂಬ ಹೆಸರಿನಲ್ಲಿ ಈ ಜಾತ್ರೆ ನಡೆಯುತ್ತದೆ. ಇದರಲ್ಲಿ ಹೆಚ್ಚಾಗಿ ಬುಡಕಟ್ಟು ಸಮುದಾಯದ ಜನರೇ ಭಾಗಿಯಾಗ್ತಾರೆ.
ಸುಮಾರು 100 ವರ್ಷಗಳ ಇತಿಹಾಸ ಇರುವ ಈ ಜಾತ್ರೆ ಎರಡು ದಿನಗಳ ಕಾಲ ನಡೆಯುತ್ತದೆ. ಪುರಾತನ ಕಾಲದಲ್ಲಿ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ಮಹಿಳೆಯರಿಗೆ ಇರಲಿಲ್ಲ. ಆದರೆ, ಈ ಜಾತ್ರೆಯಲ್ಲಿ ಬುಡಕಟ್ಟು ಸಮುದಾಯದ ಯುವತಿಯರು ತಮ್ಮಿಷ್ಟದ ಯುವಕನನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಇದರಲ್ಲಿ ನೇಪಾಳ, ಜಾರ್ಖಂಡ್, ಬಂಗಾಳ, ಒಡಿಶಾ ಸೇರಿದಂತೆ ಭಾರತದ ವಿವಿಧ ಭಾಗಗಳಿಂದ ಬುಡಕಟ್ಟು ಜನಾಂಗದ ಯುವಕರು ಆಗಮಿಸುತ್ತಾರೆ.
ಮೊದಲನೆಯದಾಗಿ, ಹುಡುಗನಿಗೆ ಇಷ್ಟ ಆಗುವ ಹುಡುಗಿಯನ್ನು ಪಾನ್ ತಿನ್ನಲು ಆಹ್ವಾನಿಸುತ್ತಾನೆ. ಈ ವೇಳೆ ಹುಡುಗಿ ಪಾನ್ ತಿಂದರೆ, ಇಬ್ಬರು ಪರಸ್ಪರ ಒಪ್ಪಿಕೊಂಡಂತೆ. ಇದರ ಬೆನ್ನಲ್ಲೇ ಹುಡುಗ ತನ್ನಿಷ್ಟದ ಹುಡುಗಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ. ಇಲ್ಲಿ ಕೆಲ ದಿನಗಳ ಕಾಲ ಒಟ್ಟಿಗೆ ವಾಸ ಮಾಡ್ತಾರೆ. ತದನಂತರ ಇವರಿಗೆ ಮದುವೆ ಮಾಡಲಾಗುತ್ತದೆ. ಒಂದು ವೇಳೆ ಜಾತ್ರೆಯಲ್ಲಿ ಇಷ್ಟಪಟ್ಟು ಮದುವೆಯಾಗಲು ನಿರಾಕರಿಸಿದರೆ ಯುವಕ-ಯುವತಿಗೆ ದೊಡ್ಡ ದಂಡ ಹಾಗೂ ಕಠಿಣ ಶಿಕ್ಷೆ ವಿಧಿಸಲಾಗ್ತದೆ.
ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಬೇರೆ ಬೇರೆ ಸ್ಪರ್ಧೆಗಳು ಆಯೋಜನೆಗೊಂಡಿರುತ್ತವೆ. ಈ ವೇಳೆ ಹಳ್ಳಿಯ ಯುವಕರು ತಮ್ಮ ಶಕ್ತಿ ಪ್ರದರ್ಶನ ಮಾಡ್ತಾರೆ.