ಪಾಲಿ (ರಾಜಸ್ಥಾನ): ಕ್ಯಾಬಿನ್ ಸಿಬ್ಬಂದಿ ಮತ್ತು ವೈದ್ಯರ ಸಹಾಯದಿಂದ ಮಾರ್ಚ್ 17ರಂದು ಬೆಂಗಳೂರಿನಿಂದ ಜೈಪುರಕ್ಕೆ ತೆರಳಿದ ವಿಮಾನದಲ್ಲಿ ಮಹಿಳೆಯೋರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಆ ಮಗುವಿಗೆ ಜನನ ಪ್ರಮಾಣಪತ್ರ ಪಡೆಯಲು ಪೋಷಕರು ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ.
ಇಂಡಿಗೊ ವಿಮಾನಯಾನ ಸಂಸ್ಥೆಯ ಪ್ರಕಾರ, ಫ್ಲೈಟ್ 6ಇ -469 ರ ಹಾರಾಟದ ಮಧ್ಯೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕ್ಯಾಬಿನ್ ಸಿಬ್ಬಂದಿ ಮತ್ತು ವೈದ್ಯರ ಸಹಾಯದಿಂದ ಅವರಿಗೆ ಹೆರಿಗೆ ಮಾಡಿಸಲಾಗಿದೆ. ವಿಮಾನದಲ್ಲಿ ಸಹ ಪ್ರಯಾಣಿಕರಾಗಿದ್ದ ಡಾ.ಸುಭಾನಾ ನಜೀರ್ ವಿಮಾನ ಸಿಬ್ಬಂದಿಯಲ್ಲಿ ಲಭ್ಯವಿದ್ದ ವೈದ್ಯಕೀಯ ಸಹಾಯವನ್ನು ಬಳಸಿಕೊಂಡು ಯಶಸ್ವಿ ಹೆರಿಗೆ ಮಾಡಲು ಸಹಕರಿಸಿದ್ದಾರೆ ಎಂದು ತಿಳಿಸಿದೆ.
ಈ ಬಗ್ಗೆ ಮಗುವಿನ ತಂದೆ ಭೈರೋ ಸಿಂಗ್ ಮಾತನಾಡಿ, "ವೈದ್ಯರ ಸಲಹೆ ಪಡೆದ ನಂತರ ಅಂದು 8 ತಿಂಗಳ ಗರ್ಭಿಣಿ ಹೆಂಡತಿಯೊಂದಿಗೆ ಪ್ರಯಾಣಿಸಬೇಕಾಗಿತ್ತು. ನನ್ನ ತಂದೆಯ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ತುರ್ತು ಪ್ರವಾಸ ಕೈಗೊಂಡಿದ್ದೆ. ಈ ಮಧ್ಯೆ ಆಕೆಗೆ ಹೆರಿಗೆಯಾಯಿತು" ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಿಂದ ಜೈಪುರಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲೇ ಮಹಿಳೆಗೆ ಹೆರಿಗೆ!
"ಆ ದಿನ, ವಿಮಾನಯಾನ ಸಂಸ್ಥೆ ನಮಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿತ್ತು. ವಿಮಾನ ನಿಲ್ದಾಣಕ್ಕೆ ಇಳಿದ ನಂತರ ನಾವು ಆಸ್ಪತ್ರೆಗೆ ತೆರಳಿದ್ದೆವು. ವಿಪರ್ಯಾಸವೆಂದರೆ, ನನ್ನ ಮಗುವಿಗೆ ಜನನ ಪ್ರಮಾಣಪತ್ರ ನೀಡಲು ಯಾವುದೇ ಆಸ್ಪತ್ರೆಯೂ ಒಪ್ಪುತ್ತಿಲ್ಲ " ಎಂದು ಸಿಂಗ್ ಬೇಸರ ವ್ಯಕ್ತಪಡಿಸಿದರು.
ಈ ಮೊದಲು, ನಾನು ಈ ವಿಷಯದಲ್ಲಿ ಸಹಾಯ ಮಾಡಲು ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಸಂಪರ್ಕಿಸಿದಾಗ, ಅವರು ಒಪ್ಪಿದರು. ಆದರೆ ಈಗ ಅವರು ನನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ವಿಷಾದಿಸಿದರು.