ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಒಂದು ತಿಂಗಳ ನಂತರ ಸೋಮವಾರ ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸಿದ್ದಾರೆ. ತಮ್ಮ ಹೊಸ ರಾಜಕೀಯ ಪಕ್ಷಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ (Democratic Azad Party) ಎಂದು ಹೆಸರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಆಜಾದ್, ತಮ್ಮ ಪಕ್ಷ ಜಾತ್ಯತೀತ, ಪ್ರಜಾಪ್ರಭುತ್ವ ತಳಹದಿಯಲ್ಲಿ ಕೆಲಸ ಮಾಡಲಿದ್ದು, ಯಾವುದೇ ಪ್ರಭಾವದಿಂದ ಸ್ವತಂತ್ರವಾಗಿರುತ್ತದೆ. ಹಳದಿ, ಬಿಳಿ ಮತ್ತು ನೀಲಿ ಬಣ್ಣಗಳನ್ನು ಹೊಂದಿರುವ ಡೆಮಾಕ್ರಟಿಕ್ ಆಜಾದ್ ಪಕ್ಷದ ಧ್ವಜವನ್ನು ಸಹ ಅವರು ಅನಾವರಣಗೊಳಿಸಿದರು.
ಕಾಂಗ್ರೆಸ್ ತೊರೆದ ನಂತರ ಜಮ್ಮುವಿನಲ್ಲಿ ನಡೆದ ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ, ಸಂಪೂರ್ಣ ರಾಜ್ಯತ್ವದ ಮರುಸ್ಥಾಪನೆಯ ಮೇಲೆ ಕೇಂದ್ರೀಕರಿಸುವ ತಮ್ಮದೇ ಆದ ರಾಜಕೀಯ ಸಂಘಟನೆ ಪ್ರಾರಂಭಿಸುವುದಾಗಿ ಈ ಹಿಂದೆ ಆಜಾದ್ ಘೋಷಿಸಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ರಾಜಕೀಯ ಸಂಘಟನೆಯ ಮೊದಲ ಘಟಕವನ್ನು ರಚಿಸಲಾಗುವುದು ಎಂದು ಅವರು ಹೇಳಿದರು. ನನ್ನ ಪಕ್ಷವು ರಾಜ್ಯಕ್ಕೆ ಸಂಪೂರ್ಣ ರಾಜ್ಯದ ಸ್ಥಾನಮಾನ, ಭೂಮಿಯ ಹಕ್ಕು ಮತ್ತು ಸ್ಥಳೀಯ ನಿವಾಸಿಗಳಿಗೆ ಉದ್ಯೋಗದ ಮರುಸ್ಥಾಪನೆ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಅನ್ನು ನಾವು ನಮ್ಮ ರಕ್ತದಿಂದ ಕಟ್ಟಿದ್ದೇವೆ. ಕಂಪ್ಯೂಟರ್‌ನಿಂದ ಅಲ್ಲ, ಟ್ವಿಟರ್‌ನಿಂದ ಅಲ್ಲ. ಆದರೂ ಜನ ನಮ್ಮನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರ ವ್ಯಾಪ್ತಿಯು ಕಂಪ್ಯೂಟರ್ ಮತ್ತು ಟ್ವೀಟ್‌ಗಳಿಗೆ ಸೀಮಿತವಾಗಿದೆ. ಹೀಗಾಗಿಯೇ ಕಾಂಗ್ರೆಸ್ ಈ ಭೂಮಿಯ ಮೇಲೆ ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಆಜಾದ್ ಜಮ್ಮುವಿನ ಸೈನಿಕ ಕಾಲೋನಿಯಲ್ಲಿ ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ಆಜಾದ್ ಅವರು 2005 ರಿಂದ 2008 ರವರೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು.
ಇದನ್ನೂ ಓದಿ: ರಾಹುಲ್ ಒಳ್ಳೆಯ ವ್ಯಕ್ತಿ, ಆದರೆ ರಾಜಕೀಯಕ್ಕೆ ಬೇಕಾದ ಸಾಮರ್ಥ್ಯ ಹೊಂದಿಲ್ಲ: ಆಜಾದ್