ಗಯಾ: ಬಿಹಾರದ ಗಯಾ ಜಿಲ್ಲೆ ಛತ್ ಹಬ್ಬದ ಹಿನ್ನೆಲೆಯಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಗೆ ಸಂಬಂಧಿಸಿದ ಘಟನೆಗೆ ಸಾಕ್ಷಿಯಾಗಿದೆ. ಇಲ್ಲಿ ಮುಸ್ಲಿಮರು ಘಾಟ್‌ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಹಾಗೆಯೇ ಬುದ್ಧಗಯಾ ಬ್ಲಾಕ್‌ನ ಚೆರ್ಕಿ ನಿಷ್ಕಾದಲ್ಲಿ ಹತ್ತಾರು ಮುಸ್ಲಿಮರು ಕಳೆ ತೆರವುಗೊಳಿಸಿದ್ದಾರೆ.
ನಿಷ್ಕಾದ ಸಾಮಾಜಿಕ ಕಾರ್ಯಕರ್ತ ತಂಝೀಲ್-ಉರ್-ರೆಹಮಾನ್ ಖಾನ್ ನೇತೃತ್ವದಲ್ಲಿ ಹತ್ತಾರು ಹಿಂದೂ-ಮುಸ್ಲಿಮ್ ಸಮುದಾಯದವರು ನಿಷ್ಕಾ ಗ್ರಾಮದ ಪಕ್ಕದಲ್ಲಿರುವ ಮೊರ್ಹಾರ್ ನದಿಯಲ್ಲಿರುವ ಕಾಳಿ ಘಾಟ್ ಮತ್ತು ಭಟ್ಟ ಘಾಟ್ ಸ್ವಚ್ಛಗೊಳಿದ್ದಾರೆ.
ಎರಡೂ ಸಮುದಾಯದವರು ಪ್ರದೇಶದ ಸುತ್ತಲಿನ ಕೊಳಕು ಮತ್ತು ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಈ ನಿಷ್ಕಾ ಗ್ರಾಮವು ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಹಾಗೆಯೇ ಅದರ ಪಕ್ಕದಲ್ಲಿ ಅದೇ ಸಂಖ್ಯೆಯನ್ನು ಹೊಂದಿರುವ ಇತರ ಗ್ರಾಮಗಳೂ ಇವೆ. ಇಡೀ ಪ್ರದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ಜನಸಂಖ್ಯೆಯು ಸಮಾನವಾಗಿದೆ. ಆದರೆ, ಈ ಗ್ರಾಮದಲ್ಲಿ ಮಾತ್ರ ಮುಸ್ಲಿಮರ ಜನಸಂಖ್ಯೆ ಹೆಚ್ಚು. ಪ್ರಮುಖ ಸಂಗತಿ ಎಂದರೆ ಈ ಗ್ರಾಮದಲ್ಲಿ ಇಲ್ಲಿಯವರೆಗೂ ಹಿಂದೂ-ಮುಸ್ಲಿಮರ ನಡುವೆ ಯಾವುದೇ ವಿವಾದ ನಡೆದಿಲ್ಲ. ಯಾವುದೇ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದರೂ, ವಿಷಯ ತಮ್ಮಲ್ಲೇ ಇತ್ಯರ್ಥಮಾಡಿಕೊಳ್ಳುತ್ತಾರೆ.
ಕೆಲವರು ಜಾತಿ ಮತ್ತು ಪಂಥದ ಹೆಸರಿನಲ್ಲಿ ಅಶಾಂತಿ ಹರಡಲು ಪ್ರಯತ್ನಿಸುತ್ತಾರೆ. ಆದರೆ, ಅವರ ಪ್ರಯತ್ನ ಇಲ್ಲಿ ಯಶಸ್ವಿಯಾಗುವುದಿಲ್ಲ. ಏಕೆಂದರೆ ಇದು ನಮ್ಮ ನಡುವಿನ ಪ್ರೀತಿಯ ವಿಷಯವಾಗಿದೆ ಎಂದು ಅಮಿಶ್ ಮಾಂಝಿ ಹೇಳಿದರು. ಈ ಕಾರಣಕ್ಕಾಗಿಯೇ ಎಲ್ಲರೂ ಒಟ್ಟಾಗಿ ಹಬ್ಬಗಳನ್ನು ಆಚರಿಸುತ್ತಾರಂತೆ.
ಛತ್ ಹಬ್ಬವು ಬಿಹಾರದ ಒಂದು ದೊಡ್ಡ ಹಬ್ಬ. ಹಿಂದೂಗಳು ಇದನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಆಚರಿಸುತ್ತಾರೆ.