ನೋಯ್ಡಾ(ಉತ್ತರಪ್ರದೇಶ) : 55 ವರ್ಷದ ಮಹಿಳೆಯ ಮೇಲೆ ನಾಲ್ವರು ಅತ್ಯಾಚಾರವೆಸಗಿರುವ ಘಟನೆ ದೆಹಲಿ ಪಕ್ಕದಲ್ಲಿರುವ ಗ್ರೇಟರ್ ನೋಯ್ಡಾದ ಜೇವರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ, ಜಾನುವಾರುಗಳಿಗೆ ಮೇವು ತರಲು ಕಾಡಿಗೆ ತೆರಳಿದ್ದ ವೇಳೆ ನಾಲ್ವರು ಯುವಕರ ತಂಡ ಆಕೆಯ ಮೇಲೆ ಅತ್ಯಾಚಾರವೆಸಗಿದೆ.
ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಕಷ್ಟಪಟ್ಟು ಮನೆ ತಲುಪಿದ್ದಾಳೆ. ಈ ವೇಳೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಸಾಮೂಹಿಕ ಅತ್ಯಾಚಾರ ಮತ್ತು ಎಸ್ಸಿಟಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ದಯನಾಥಪುರದಲ್ಲಿ 55 ವರ್ಷದ ಈ ಮಹಿಳೆ ಕಾಡಿಗೆ ಮೇವು ತರಲು ಹೋದಾಗ, ಆಕೆಯನ್ನು ಯುವಕರು ಹಿಂಬಾಲಿಸಿ ದುಷ್ಕೃತ್ಯವೆಸಗಿದ್ದಾರೆ. ಬೆಳಗ್ಗೆ 9 ರಿಂದ 10 ಗಂಟೆ ನಡುವೆ ಈ ಘಟನೆ ನಡೆದಿದೆ. ನಾಲ್ವರಲ್ಲಿ ಓರ್ವ ಅಲ್ಲಿಯೇ ದನ ಮೇಯಿಸುತ್ತಿದ್ದು, ಆತ ಗಾಂಜಾ ಸೇವಿಸುತ್ತಿದ್ದನೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಊರಿಗೆ ಬರುತ್ತಿದ್ದ ಯೋಧ ಅಪಘಾತದಲ್ಲಿ ಸಾವು.. ಗರ್ಭಿಣಿ ಪತ್ನಿಗೆ ಆಘಾತ, ಆತ್ಮಹತ್ಯೆ ಯತ್ನ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ವೃಂದಾ ಶುಕ್ಲಾ, ಆರೋಪಿಗಳು ಕುಡಿದ ಮತ್ತಿನಲ್ಲಿ ದುಷ್ಕೃತ್ಯವೆಸಗಿದ್ದಾರೆ. ಅವರ ಬಂಧನಕ್ಕಾಗಿ ತಂಡ ರಚಿಸಲಾಗುವುದು. ಸಂತ್ರಸ್ತೆಯ ಸ್ಥಿತಿ ಸ್ಥಿರವಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದರು.