ಗಂಗಾಸಾಗರ (ಪಶ್ಚಿಮ ಬಂಗಾಳ ): ಎಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಗಂಗಾ ನದಿಯ ಸಂಗಮದ ದಡದಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಇಂದು ಪವಿತ್ರ ಸ್ನಾನ ಮಾಡಿದ್ದಾರೆ. ಸಂಕ್ರಾಂತಿ ಹಿನ್ನೆಲೆ, ಶನಿವಾರ ಮುಂಜಾನೆ ಚಳಿ, ಮೋಡ ಕವಿದ ವಾತಾವರಣವನ್ನು ಲೆಕ್ಕಿಸದೇ ಜನರು ಪವಿತ್ರ ಸ್ನಾನ ಮಾಡಿದ್ದಾರೆ.
ಶುಕ್ರವಾರ ಮತ್ತು ಶನಿವಾರದ ಶುಭ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಯಾತ್ರಿಕರು ಇಲ್ಲಿ ಸೇರಿದ್ದರು. ಶುಕ್ರವಾರದಂತೆ ಶನಿವಾರವೂ ಜನಸಂದಣಿ ಇತ್ತು. ಲಕ್ಷಗಟ್ಟಲೇ ಮಂದಿ ನೀರಿನಲ್ಲಿ ಮಿಂದೆದ್ದು, ಕೈಮುಗಿದು ಪ್ರಾರ್ಥನೆ ಸಲ್ಲಿಸಿದರು.
ಕೋಲ್ಕತ್ತಾ ಹೈಕೋರ್ಟ್‌ನ ಆದೇಶದ ನಂತರ ಸಾಕಷ್ಟು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಪೊಲೀಸ್ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿದ್ದರು. ಕೋಸ್ಟ್ ಗಾರ್ಡ್‌ನ ಬೋಟ್‌ಗಳು ಸಹ ನಿಗಾ ಇರಿಸಿದ್ದವು. ಡ್ರೋನ್‌ಗಳ ಮೂಲಕ ಕೂಡ ಹದ್ದಿನ ಕಣ್ಣಿಡಲಾಗಿತ್ತು.
ಇದನ್ನೂ ಓದಿ: ಎಚ್ಚರ..! ಸಮುದಾಯಕ್ಕೆ ಹರಡಿದೆ ಕೋವಿಡ್ ರೂಪಾಂತರಿ ಒಮಿಕ್ರಾನ್ : ಅಧ್ಯಯನದಿಂದ ಬಹಿರಂಗ
ಗಂಗಾಸಾಗರ ಮೇಳ 2022 ಮುಕ್ತಾಯಗೊಂಡಿದೆ. ಆದರೆ ಈ ಸಂದರ್ಭದಲ್ಲಿ ಲಕ್ಷಗಟ್ಟಲೇ ಜನ ಸೇರಿದ್ದು, ಸೋಂಕಿನ ಸೂಪರ್ ಸ್ಪ್ರೆಡರ್ಸ್ ಆಗಲಿದ್ದಾರಾ ಎಂಬ ಆತಂಕ ಹೆಚ್ಚಿದೆ. ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ ಮೂರು ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾಗರ್ ದ್ವೀಪಗಳಲ್ಲಿ ಸೇರಿದ್ದರು.