ರಿಷಿಕೇಶ, ಉತ್ತರಾಖಂಡ: ಹಿಮಾಲಯ ಮತ್ತು ಬೇರೆ ಬೇರೆ ಪರ್ವತ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಗಂಗಾ ನದಿ ತುಂಬಿ ತುಳುಕುತ್ತಿದೆ. ಪರಮಾರ್ಥ್ ನಿಕೇತನ್ ಘಾಟ್‌ನಲ್ಲಿ ನಿರ್ಮಿಸಲಾದ ಶಿವನ ವಿಗ್ರಹವನ್ನು ಗಂಗಾ ನದಿ ಸ್ಪರ್ಶಿಸಿ ಹರಿಯುತ್ತಿದ್ದು, 2013ರ ಪ್ರವಾಹ ಪರಿಸ್ಥಿತಿ ನೆನಪುಗಳು ಮತ್ತೆ ಕಾಡುವಂತೆ ಮಾಡಿವೆ.
ನಿರಂತರ ಮಳೆಯಿಂದಾಗಿ, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರ ಕಾಳಜಿ ಹೆಚ್ಚಾಗಿದೆ. ಗಂಗಾ ದಸರಾ ಜೂನ್ 20ರಂದು ನಡೆಯಲಿದ್ದು, ಇಲ್ಲಿಗೆ ಬರುವ ಕೆಲವು ಭಕ್ತರು ಗಂಗಾ ನದಿಯ ಉಗ್ರರೂಪವನ್ನು ಕಂಡು ಭಯಭೀತರಾಗಿದ್ದಾರೆ. ಇನ್ನೂ ಕೆಲವರು 2013ರ ಪ್ರವಾಹದ ವೇಳೆ ಈ ಶಿವನ ಮೂರ್ತಿ ಮುಳುಗಿದ್ದನ್ನು ನೆನಪಿಸಿಕೊಂಡಿದ್ದಾರೆ.
ಪ್ರವಾಹ ದುರಂತದ ನಂತರ ಈ ಶಿವನ ಮೂರ್ತಿಯ ಚಿತ್ರಗಳು ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಕಾಣಿಸಿಕೊಂಡಿದ್ದವು. ಈಗ ಮತ್ತೊಮ್ಮೆ ಅದೇ ಚಿತ್ರ ಮುನ್ನೆಲೆಗೆ ಬರುತ್ತಿದೆ. ಮತ್ತೊಂದು ಆಯಾಮದಲ್ಲಿ ಶಿವನನ್ನು ಸ್ಪರ್ಶಿಸಿ ಹರಿಯುವ ಗಂಗೆ ಭಕ್ತರಲ್ಲಿ ಭಕ್ತಿ ಹೆಚ್ಚುವಂತೆ ಮಾಡುತ್ತಿದೆ.
ಗಂಗಾ ನೀರಿನ ಮಟ್ಟ ಏರಿಕೆಯಿಂದಾಗಿ ಗಂಗಾ ದಸರಾ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುವ ಭಕ್ತರಲ್ಲಿ ನಿರಾಸೆ ಉಂಟಾಗಿದ್ದು, ಗಂಗಾ ಸ್ನಾನ ಅಸಾಧ್ಯವೂ, ಕಷ್ಟವೂ ಜೊತೆಗೆ ತುಂಬಾ ಅಪಾಯಕಾರಿಯೂ ಆಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜೂನ್ 21ರಿಂದ ಅನ್ಲಾಕ್ 2.0: ಬಸ್, ಮೆಟ್ರೋ ಓಡಾಟಕ್ಕೆ ಸಿಗುತ್ತಾ ಅವಕಾಶ?
ಈಗಾಗಲೇ ಗಂಗಾ ನದಿ ನೀರಿನಲ್ಲಿ ರಿಷಿಕೇಶ ಪ್ರದೇಶದ ತ್ರಿವೇಣಿ ಘಾಟ್ ಸೇರಿದಂತೆ ಹಲವು ಘಾಟ್‌ಗಳು ಮುಳುಗಿವೆ. ಚಂಡೇಶ್ವರ ನಗರ, ತ್ರಿವೇಣಿ ಘಾಟ್, ಗೋಹ್ರಿ ಮಾಫಿ ಸೇರಿದಂತೆ ಹಲವೆಡೆ ಎಚ್ಚರಿಕೆ ನೀಡಲಾಗುತ್ತಿದೆ. ಎಲ್ಲರೂ ಸುರಕ್ಷಿತ ಸ್ಥಳದಲ್ಲಿರುವಂತೆ ಮನವಿ ಮಾಡಲಾಗಿದೆ. ಇದರೊಂದಿಗೆ ಹರಿದ್ವಾರದಲ್ಲಿನ ಆಡಳಿತವೂ ಎಚ್ಚರಿಕೆ ನೀಡಿ ಗಂಗೆಯ ದಡದಲ್ಲಿರುವ ಪ್ರದೇಶಗಳನ್ನು ಖಾಲಿ ಮಾಡುವಂತೆ ಜನರಿಗೆ ಸೂಚನೆ ನೀಡಿದೆ.