ಅದು 22ನೇ ಸೆಪ್ಟೆಂಬರ್ 1921. ಮಹಾತ್ಮ ಗಾಂಧೀಜಿ ತಮ್ಮ ಗುಜರಾತಿ ಸಾಂಪ್ರದಾಯಿಕ ಉಡುಪನ್ನು ತೊರೆಯಲು ನಿರ್ಧರಿಸಿದ ಮಹತ್ವದ ದಿನ.
ಅವತ್ತಿನಿಂದ ಸರಳ ಧೋತಿ ಮತ್ತು ಶಾಲು ಧರಿಸಿದರು ರಾಷ್ಟ್ರಪಿತ. ಗಾಂಧಿಯ ಈ ಉಡುಪು ಬ್ರಿಟಿಷ್ ಅಧಿಕಾರಿ ವಿನ್‌ಸ್ಟನ್ ಚರ್ಚಿಲ್ ಇಂಪ್ರೆಸ್ ಮಾಡಿತ್ತು. ಅದಕ್ಕಾಗಿಯೇ ಅವರು ಗಾಂಧಿಯನ್ನ 'ಅರೆಬೆತ್ತಲೆ ಫಕೀರ' ಎಂದು ಕರೆದಿದ್ದರು. ಮಧುರೈನಲ್ಲಿ ಗಾಂಧಿ ಪರಿವರ್ತನೆಗೊಂಡ ಜಾಗ ಈಗ ಖಾದಿ ಎಂಪೋರಿಯಂ ಐಕಾನ್ ಆಗಿ ಮಾರ್ಪಟ್ಟಿದೆ.
"ನನ್ನ ಜೀವನಕ್ರಮದಲ್ಲಿ ನಾನು ಮಾಡಿದ ಎಲ್ಲಾ ಬದಲಾವಣೆಗಳು ಮಹತ್ವದ ಸಂದರ್ಭಗಳಲ್ಲಿ ಪರಿಣಾಮ ಬೀರಿವೆ. ಆಳವಾದ ಚರ್ಚೆಯ ನಂತರ ಬದಲಾವಣೆಗಳನ್ನು ಕಂಡುಕೊಳ್ಳಲಾಗಿದೆ. ಅಂತಹ ಒಂದು ಆಮೂಲಾಗ್ರ ಬದಲಾವಣೆ ನನ್ನ ಉಡುಪಿನ ಜತೆಗೂ ನಡೆಯಿತು. ನಾನು ಮಧುರೈನಲ್ಲಿ ನನ್ನ ಉಡುಗೆ ತೊಡುಗೆ ಬದಲಿಸುವ ನಿರ್ಧಾರಕ್ಕೆ ಬಂದೆ" ಎಂದು ಸ್ವತಃ ಮಹಾತ್ಮ ಗಾಂಧೀಜಿ ಹೇಳಿಕೊಂಡಿದ್ದಾರೆ.
ಪ್ರತಿಯೊಬ್ಬರು ತಮ್ಮ ಬಟ್ಟೆಯನ್ನು ತಾವೇ ನೇಯ್ದುಕೊಳ್ಳಬೇಕು ಎಂದು ಗಾಂಧಿ ಪ್ರತಿಪಾದಿಸಿದರು. ಗಾಂಧಿ ಉಡುಪು ನ್ಯಾಯಾಲಯದ ಶಿಷ್ಟಾಚಾರಕ್ಕೆ ವಿರುದ್ಧವಾಗಿತ್ತು. ಧೋತಿ ಮತ್ತು ಶಾಲು ಧರಿಸಿಯೇ ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನಗಳಲ್ಲಿ ಗಾಂಧೀಜಿ ಭಾಗವಹಿಸಿದರು.
ಮಧುರೈನ ವೆಸ್ಟ್ ಮಾಸಿ ಬೀದಿಯಲ್ಲಿರುವ ಮನೆಯೊಂದರಲ್ಲಿ ತಂಗಿದ್ದ ಅವರು ಸಾಮಾನ್ಯ ರೈತರ ಉಡುಗೆಯನ್ನು ಧರಿಸಿ ಹೊರ ಬಂದರು. ಕಾರೈಕುಡಿಗೆ ಹೋಗುವ ಮಾರ್ಗದಲ್ಲಿ ಗಾಂಧಿ ಜನರ ಗುಂಪನ್ನು ಉದ್ದೇಶಿಸಿ ಮಾತನಾಡಿದರು. ಅವರ ಉಡುಪು ಬ್ರಿಟಿಷ್ ಶೋಷಣೆಯ ವಿರುದ್ಧ ಅಲೆಯನ್ನೇ ಸೃಷ್ಟಿಸಿತು. ಅವರ ರಾಜಕೀಯ ಹೇಳಿಕೆಯ ಸಂದೇಶವನ್ನು ಹರಡಿತು. ಇದು ಮಧುರೈನಿಂದ ಆರಂಭವಾಯಿತು.
ಮೊಟ್ಟ ಮೊದಲ ಬಾರಿಗೆ ಗಾಂಧೀಜಿ ಖಾದಿ ಧೋತಿ ಮತ್ತು ಶಾಲು ಧರಿಸಿ ಕಾಣಿಸಿದ್ದ ಸ್ಥಳವನ್ನು ಈಗ 'ಗಾಂಧಿ ಪೊಟ್ಟಲ್' ಎಂದು ಕರೆಯಲಾಗುತ್ತದೆ. ಮಧುರೈನಲ್ಲಿ ಮೊದಲ ಬಾರಿಗೆ ಖಾದಿ ಬಟ್ಟೆ ಧರಿಸಿ ಕಾಣಿಸಿದ್ದ ಸ್ಥಳದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ನಿರ್ಮಿಸಲಾಗಿದೆ.
ಗಾಂಧಿಯವರ ಉಡುಗೆಯ ರೂಪಾಂತರವು ಸ್ವಾತಂತ್ರ್ಯಕ್ಕಾಗಿ ಹಾತೊರೆಯುವ ಮನಸ್ಸುಗಳನ್ನು ಹುರಿದುಂಬಿಸಿತು. ಇದು ಬ್ರಿಟಿಷ್ ಸರಕುಗಳ ಬಹಿಷ್ಕಾರಕ್ಕೆ ಕಾರಣವಾಯಿತು. ಇದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು.