ನವದೆಹಲಿ: ಪಂಚ ರಾಜ್ಯಗಳ ಸೋಲಿನ ಬಳಿಕ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನದ ಬೇಗುದಿ ಹೆಚ್ಚಾಗುತ್ತಲೇ ಇದ್ದು, ಭಿನ್ನಮತೀಯರಾದ 'ಜಿ-23' ಬಳಗದ ಬಲ ಹೆಚ್ಚಾಗುತ್ತಲೇ ಇದೆ. ಮತ್ತೊಂದೆಡೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಸೋಲಿನ ಬಗ್ಗೆ ಚರ್ಚಿಸಲು ಈ ನಾಯಕರು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಕುತೂಹಲಕಾರಿ ಸಂಗತಿ ಎಂದರೆ 'ಜಿ 23' ನಾಯಕರಲ್ಲದೇ ಮಣಿಶಂಕರ್ ಅಯ್ಯರ್ ಮತ್ತು ಪ್ರಣೀತ್ ಕೌರ್ ಹಾಗೂ ಶಶಿ ತರೂರು ಸೇರಿದಂತೆ ಕೆಲವು ಪಕ್ಷದ ಭಿನ್ನಮತೀಯರೂ ಈ ಸಭೆಯಲ್ಲಿ ಭಾಗವಹಿಸಿದ್ದರು. ಸುಮಾರು 4 ಗಂಟೆಗಳ ಕಾಲ ಸಭೆ ನಡೆದರೂ ಫಲಿತಾಂಶದ ಬಗ್ಗೆ ಯಾವುದೇ ನಾಯಕರು ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ. ಆದರೂ 2024ರ ಸಾರ್ವತ್ರಿಕ ಚುನಾವಣೆಯ ತಯಾರಿಗಾಗಿ ಪಕ್ಷವು ಸಾಮೂಹಿಕ ನಾಯಕತ್ವದ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಸೂಚಿಸುವ ಹೇಳಿಕೆಯನ್ನು ಕಾಂಗ್ರೆಸ್ ಭಿನ್ನಮತೀಯರ ಗುಂಪು ಬಿಡುಗಡೆ ಮಾಡಿದೆ.
ನಾವು ಕಾಂಗ್ರೆಸ್ ಪಕ್ಷದ ಸದಸ್ಯರು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿನ ನಿರಾಶಾದಾಯಕ ಫಲಿತಾಂಶ, ನಮ್ಮ ಕಾರ್ಯಕರ್ತರು ಮತ್ತು ನಾಯಕರ ನಿರಂತರ ವಲಸೆಯ ಬಗ್ಗೆ ಚರ್ಚಿಸಲು ಪರಸ್ಪರ ಭೇಟಿಯಾಗಿದ್ದೆವು. ಎಲ್ಲಾ ಹಂತಗಳಲ್ಲಿ ಸಾಮೂಹಿಕ ಮತ್ತು ಅಂತರ್ಗತ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಮಾದರಿಯನ್ನು ಕಾಂಗ್ರೆಸ್ ಅಳವಡಿಸಿಕೊಳ್ಳುವುದು ಒಂದೇ ದಾರಿ ಎಂಬುದನ್ನು ನಾವು ನಂಬುತ್ತೇವೆ ಎಂದು ಜಿ-23 ನಾಯಕರು ಪ್ರತಿಪಾದಿಸಿದ್ದಾರೆ.
ಬಿಜೆಪಿ ವಿರೋಧಿಸಲು ಕಾಂಗ್ರೆಸ್ ಬಲವರ್ದನೆ ಅಗತ್ಯ: ಬಿಜೆಪಿ ವಿರೋಧಿಸಲು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು ಅಗತ್ಯವಾಗಿದೆ. 2024ಕ್ಕೆ ವಿಶ್ವಾಸಾರ್ಹ ಪರ್ಯಾಯಕ್ಕೆ ದಾರಿ ಮಾಡಿಕೊಡಲು ವೇದಿಕೆ ಸೃಷ್ಟಿಸಲು ಇತರ ಸಮಾನ ಮನಸ್ಕ ಶಕ್ತಿಗಳೊಂದಿಗೆ ಸಂವಾದ ಪ್ರಾರಂಭಿಸಲು ನಾವು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತೇವೆ. ಮುಂದಿನ ಹಂತಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಮನೀಶ್ ತಿವಾರಿ, ಅಖಿಲೇಶ್ ಪ್ರಸಾದ್ ಸಿಂಗ್, ಶಂಕರ್ ಸಿಂಗ್ ವಘೇಲಾ, ಶಶಿ ತರೂರ್, ಎಂಎ ಖಾನ್, ಸಂದೀಪ್ ದೀಕ್ಷಿತ್, ವಿವೇಕ್ ತಂಖಾ, ಆನಂದ್ ಶರ್ಮಾ, ಪೃಥ್ವಿರಾಜ್ ಚವಾಣ್, ಭೂಪಿಂದರ್ ಸಿಂಗ್ ಹೂಡಾ, ರಾಜ್ ಬಬ್ಬರ್, ಮಣಿಶಂಕರ್ ಅಯ್ಯರ್, ಪಿಜೆ ಕುರಿಯನ್, ರಾಜೇಂದರ್ ಕೌರ್ ಭಟ್ಟಾಲ್, ಕುಲದೀಪ್ ಶರ್ಮಾ ಮತ್ತು ಪ್ರೀನೀತ್ ಕೌರ್ ಮೇಲಿನ ಹೇಳಿಕೆಗೆ ಸಹಿ ಹಾಕಿದ್ದಾರೆ.
ಕಾಂಗ್ರೆಸ್ ನಾಯಕ, ಜಿ 23 ಸದಸ್ಯ, ಕಪಿಲ್ ಸಿಬಲ್ ಅವರು ಗಾಂಧಿಯವರು ಪಕ್ಷದ ನಾಯಕತ್ವದಿಂದ ಹಿಂದೆ ಸರಿಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಈ ಸಭೆ ನಡೆದಿದೆ. "ನಾಯಕತ್ವ ಕೋಗಿಲೆ ನಾಡಿನಲ್ಲಿದೆ. ನನಗೆ 'ಸಬ್ ಕಿ ಕಾಂಗ್ರೆಸ್' ಬೇಕು. ಕೆಲವರಿಗೆ 'ಘರ್ ಕಿ ಕಾಂಗ್ರೆಸ್' ಬೇಕು" ಎಂದು ಸಿಬಲ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದನ್ನೂ ಓದಿ: ಸತತ ಸೋಲು ಗಂಭೀರವಾದ ವಿಚಾರ : ಜಿ-23 ಸಭೆಯಲ್ಲಿ ಕಾಂಗ್ರೆಸ್ ನಾಯಕರ ಅಭಿಪ್ರಾಯ