ಕುಲು (ಹಿಮಾಚಲ ಪ್ರದೇಶ) : ಹಿಮಾಚಲ ಪ್ರದೇಶದಲ್ಲಿ ಮಳೆ ನಿಂತಿದ್ದು ಭೂಕುಸಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹವಾಮಾನ ಪರಿಸ್ಥಿತಿ ಸಹಜ ಸ್ಥಿತಿಗೆ ತಲುಪಿರುವುದರಿಂದ ರೈತರು ಸೇಬು ಕಟಾವ್ ಮಾಡಲು ಮುಂದಾಗಿದ್ದಾರೆ. ಈ ಮಧ್ಯೆ, ದೆಹಲಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಾಲ್ಕು ದಿನಗಳವರೆಗೆ ಸೇಬುಗಳನ್ನು ಕೀಳದಂತೆ ತೋಟಗಾರರಿಗೆ ಸೂಚನೆ ನೀಡಲಾಗಿದೆ.
ಜಿ 20 ಶೃಂಗಸಭೆಯು ದೆಹಲಿಯಲ್ಲಿ ಇಂದು ಮತ್ತೆ ನಾಳೆ ನಡೆಯುತ್ತಿದೆ. ಪ್ರಪಂಚಾದ್ಯಂತ ಅನೇಕ ರಾಷ್ಟ್ರಗಳ ಮುಖ್ಯಸ್ಥರು, ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಆಜಾದ್‌ಪುರ ಮಂಡಿಯನ್ನು 4 ದಿನಗಳ ಕಾಲ ಮುಚ್ಚಲಾಗಿದೆ. ಈ ಹಿನ್ನೆಲೆ ಮುಂದಿನ 3 ರಿಂದ 4 ದಿನಗಳವರೆಗೆ ಸೇಬುಗಳನ್ನು ಕೀಳದಂತೆ ತೋಟಗಾರರಿಗೆ ಕುಲು ಹಣ್ಣು ಉತ್ಪಾದಕ ಮಂಡಳಿ ಸೂಚಿಸಿದೆ. ಸೆಪ್ಟೆಂಬರ್ 10 ರ ನಂತರ ದೆಹಲಿ ಮತ್ತು ಆಜಾದ್‌ಪುರ ಮಂಡಿಗೆ ಸೇಬು ಪೂರೈಕೆ ಸಾಧ್ಯವಾಗಲಿದೆ. ಸೇಬುಗಳನ್ನು ಹೊರತುಪಡಿಸಿ ಹಿಮಾಚಲ ಪ್ರದೇಶದಿಂದ ಇತರೆ ಹಣ್ಣುಗಳು ಮತ್ತು ತರಕಾರಿಗಳು ದೇಶಾದ್ಯಂತ ತಲುಪುತ್ತವೆ.
ಕಳೆದ ತಿಂಗಳು ಹಿಮಾಚಲ ಪ್ರದೇಶದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಸೇಬಿನ ಹಂಗಾಮಿನ ಮೇಲೆ ಭಾರಿ ಪರಿಣಾಮ ಬೀರಿತ್ತು. ಆದರೆ ಈಗ ಹವಾಮಾನ ಪರಿಸ್ಥಿತಿ ಸುಧಾರಿಸಿದ್ದು, ಕುಲುವಿನ ಎಲ್ಲಾ ಮಾರುಕಟ್ಟೆಗಳಿಗೆ ಪ್ರತಿದಿನ ಒಂದು ಲಕ್ಷ ಬಾಕ್ಸ್ ಸೇಬುಗಳು ಆಗಮಿಸುತ್ತಿವೆ. ಸುಮಾರು 500 ಸಣ್ಣ ಮತ್ತು ದೊಡ್ಡ ವಾಹನಗಳಲ್ಲಿ ಸೇಬುಗಳನ್ನು ಹೊರ ರಾಜ್ಯಗಳಿಗೆ ಸಾಗಿಸಲಾಗುತ್ತದೆ. ಹಾಗೆಯೇ, ಜಿಲ್ಲೆಯಿಂದ ಸುಮಾರು 40 ಪ್ರತಿಶತದಷ್ಟು ಸೇಬುವನ್ನು ದೆಹಲಿಯ ಆಜಾದ್‌ಪುರ ಮಂಡಿಗೆ ಕಳುಹಿಸಲಾಗುತ್ತದೆ.
ಈ ಕುರಿತು ಮಾಧ್ಯಮಗಳೊಂದಿಗೆ ಕುಲು ಹಣ್ಣು ಉತ್ಪಾದಕ ಮಂಡಳಿ ಅಧ್ಯಕ್ಷ ಮಹೇಂದ್ರ ಉಪಾಧ್ಯಾಯ ಮಾತನಾಡಿ, "ದೆಹಲಿಯಲ್ಲಿ ನಡೆಯಲಿರುವ ಜಿ 20 ಸಮ್ಮೇಳನದ ಹಿನ್ನೆಲೆ ವಾಹನ ಸಂಚಾರದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಸೇಬು ಬೆಳೆ ಕೂಡ ದೆಹಲಿ ತಲುಪಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬೆಳೆಗಾರರು ಸೇಬುವನ್ನು ಕೆಲವು ದಿನಗಳವರೆಗೆ ಕೀಳಬಾರದು" ಎಂದು ಮನವಿ ಮಾಡಿದರು.
ಇದನ್ನೂ ಓದಿ : G20 Summit : ಆಫ್ರಿಕನ್ ಯೂನಿಯನ್ಗೆ G20 ಖಾಯಂ ಸದಸ್ಯತ್ವ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ..
ಇದೇ ವೇಳೆ ಬಂದ್ರೋಲ್ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಏಜೆಂಟ್ ರೋಹಿತ್ ಪುರಿ ಮಾತನಾಡಿ, "ಚಂಡೀಗಢ, ಗಾಜಿಯಾಬಾದ್, ಹರಿಯಾಣದ ಮಂಡಿಗಳಲ್ಲಿ ಸೇಬು ಬೆಳೆಗೆ ಉತ್ತಮ ಬೆಲೆ ಸಿಗುತ್ತಿದ್ದು, ಈ ಎಲ್ಲಾ ಮಂಡಿಗಳಲ್ಲಿ ಮಾರಾಟವಾಗುತ್ತಿದೆ. ದೆಹಲಿಗೆ ಹೋಗುವ ರೈಲುಗಳನ್ನು ಮಾತ್ರ ಕೆಲವು ದಿನಗಳ ಕಾಲ ನಿಲುಗಡೆ ಮಾಡಲಾಗಿದೆ. ಉಳಿದಂತೆ ಸೇಬು ಬೆಳೆ ಕುಲು ಜಿಲ್ಲೆಯ ವಿವಿಧ ಮಾರುಕಟ್ಟೆಗಳಿಗೆ ಆಗಮಿಸುತ್ತಿದೆ" ಎಂದು ಹೇಳಿದರು.
ಇದನ್ನೂ ಓದಿ : ಮೊದಲ ಬಾರಿಗೆ ಮುಕ್ತ ಮಾರುಕಟ್ಟೆಯಿಂದ ಸೇಬು ಖರೀದಿಗೆ ಮುಂದಾದ ಅದಾನಿ ಆಗ್ರೋಫ್ರೆಶ್