ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಜೆಪಿ ವಿರುದ್ಧ ಆರೋಪಿಸಿದ್ದ ಬಂಗಾಳ ಸಿಎಂ ಈಗ ಯು-ಟರ್ನ್ ಹೊಡೆದಿದ್ದಾರೆ.
ಪೂರ್ವ ಮಿಡ್ನಾಪುರದ ನಂದಿಗ್ರಾಮ್‌ನಲ್ಲಿ ಪ್ರಚಾರ ನಡೆಸುತ್ತಿರುವಾಗ ಕಾಲಿಗೆ ಗಾಯಗಳಾಗಿದ್ದ ಘಟನೆ ಬಗ್ಗೆ ಇದೊಂದು 'ಪಿತೂರಿ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದ್ದರು. ಘಟನೆ ನಡೆದು 24 ಗಂಟೆಯೊಳಗೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಎರಡು ನಿಮಿಷಗಳ ವಿಡಿಯೊ ಕ್ಲಿಪ್ ಬಿಡುಗಡೆ ಮಾಡಿ ನಾನು ಗಂಭೀರವಾಗಿ ಗಾಯಗೊಂಡಿದ್ದೇನೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ದ್ವಂದ್ವ ಹೇಳಿಕೆಗಳಿಂದ ಈಗ ವಿಧಾನಸಭಾ ಚುನಾವಣೆ ಹೊಸ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ತನ್ನ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ತೀವ್ರ ಸವಾಲನ್ನು ಎದುರಿಸುತ್ತಿದೆ. ಅವರ ಮೇಲೆ ಹಲ್ಲೆ ನಂತರ ಇದೊಂದು ಪಿತೂರಿ ಎಂದು ಬ್ಯಾನರ್ಜಿ ಹೇಳಿಕೊಂಡಿದ್ದರು.
ತಮ್ಮ ಕಾಲಿಗೆ ಆದ ಗಾಯವನ್ನು ತೋರಿಸುತ್ತಾ ‘ಖಂಡಿತವಾಗಿಯೂ ಇದು ಪಿತೂರಿ. ನನ್ನ ಸುತ್ತಲೂ ಭದ್ರತಾ ಪಡೆ ಇರಲಿಲ್ಲ’ ಎಂದು ಪ್ರತಿಪಕ್ಷದ ವಿರುದ್ಧ ಆರೋಪಿಸಿದ್ದರು. ಕುತೂಹಲಕಾರಿ ವಿಷಯವೆಂದ್ರೆ ಈ ಘಟನೆ ನಡೆದು 24 ಗಂಟೆಯೊಳಗೆ ವಿಡಿಯೋ ಬಿಡುಗಡೆ ಮಾಡಿ ಪಿತೂರಿ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.
ಬುಧವಾರ ನಡೆದ ಘಟನೆಯಲ್ಲಿ ನಾನು ಗಂಭೀರವಾಗಿ ಗಾಯಗೊಂಡಿರುವುದು ನಿಜ. ನನ್ನ ಕಾಲಿಗೆ ಗಾಯವಾಗಿದೆ. ಗಾಯದ ಪರಿಣಾಮವಾಗಿ ನನ್ನ ತಲೆ ಮತ್ತು ಎದೆಯಲ್ಲಿ ನೋವು ಕಾಣಿಸಿಕೊಂಡಿತು. ನಾನು ಕಾರ್ ಬಾನೆಟ್‌ನಿಂದ ಜನರನ್ನು ಸ್ವಾಗತಿಸುತ್ತಿದ್ದೆ. ಈ ವೇಳೆ ತಳ್ಳಿದಂತಾಯಿತು. ಆಗ ಕಾರು ನನ್ನ ಪಾದದ ಮೇಲೆ ಹರಿದಿದೆ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಆಶ್ಚರ್ಯಕರ ಸಂಗತಿಯೆಂದರೆ ತೃಣಮೂಲ ಮುಖ್ಯಸ್ಥರು ಗುರುವಾರ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ 'ಪಿತೂರಿ' ಎಂಬ ಪದವನ್ನ ಬಳಕೆ ಮಾಡಿಲ್ಲ.