ತ್ರಿಶೂರ್ (ಕೇರಳ): ಫಿಫಾ ವಿಶ್ವಕಪ್ ಗೆದ್ದು ಅರ್ಜೆಂಟೀನಾ ಐತಿಹಾಸಿಕ ಸಾಧನೆ ಮಾಡಿದ್ದರೆ, ಇತ್ತ ಕೇರಳದಲ್ಲಿ ಅಭಿಮಾನಿಗಳು ಸೋಮವಾರ 1500 ಜನರಿಗೆ ಉಚಿತವಾಗಿ ಚಿಕನ್ ಬಿರಿಯಾನಿ, ಹಲ್ವಾ ಮತ್ತು ಮೀನಿನ ಖಾದ್ಯ ಬಡಿಸುವ ಮೂಲಕ ಸಂಭ್ರಮಿಸಿದ್ದಾರೆ. ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಶನ್ ತನ್ನ ಟ್ವಿಟರ್ ಖಾತೆಯಲ್ಲಿ ಕೇರಳದ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಹೇಳಿದೆ.
ಕೇರಳದಲ್ಲಿ ಅರ್ಜೆಂಟೀನಾ ಫುಟ್ಬಾಲ್ ತಂಡಕ್ಕೆ ಅಭಿಮಾನಿಗಳ ಬಳಗವೇ ಇದೆ. ತ್ರಿಶೂರ್‌ನ ಹೋಟೆಲ್ ಮಾಲೀಕರೊಬ್ಬರು 1,500 ಜನರಿಗೆ ಉಚಿತ ಬಿರಿಯಾನಿ ನೀಡಿದರೆ, ಪಾಲಕ್ಕಾಡ್‌ನಲ್ಲಿ ಮೀನು ಮಾರಾಟಗಾರರೊಬ್ಬರು ಎಲ್ಲರಿಗೂ ಉಚಿತವಾಗಿ ಮೀನುಗಳನ್ನು ಹಂಚಿದ್ದಾರೆ. ಕೋಯಿಕ್ಕೋಡ್‌ನಲ್ಲಿ ಹಲ್ವಾ ಮಾರಾಟಗಾರ ಸಾರ್ವಜನಿಕರಿಗೆ 100 ಕೆಜಿ ಹಲ್ವಾವನ್ನು ಉಚಿತವಾಗಿ ನೀಡಿದ್ದಾರೆ. ಮಲಪ್ಪುರಂನ ಶಾಲಾ ಶಿಕ್ಷಕರೊಬ್ಬರು ಎಲ್ಲಾ ವಿದ್ಯಾರ್ಥಿಗಳಿಗೆ ಅರೇಬಿಯನ್ ಮಾಂಸಾಹಾರಿ ಖಾದ್ಯವಾದ 'ಕಫ್ಸಾ' ಉಣಬಡಿಸಿದ್ದಾರೆ.
ಅರ್ಜೆಂಟೀನಾ ವಿಶ್ವಕಪ್ ಗೆದ್ದರೆ 1 ಸಾವಿರ ಜನರಿಗೆ ಉಚಿತವಾಗಿ ಬಿರಿಯಾನಿ ನೀಡುವುದಾಗಿ ಹೇಳಿದ್ದೆ. ಅದರಂತೆ ನನ್ನ ನೆಚ್ಚಿನ ತಂಡ ವಿಶ್ವಕಪ್ ಜಯಿಸಿದ ಕಾರಣ ಮಾತಿನಂತೆ ನಡೆದುಕೊಂಡು ಹೆಚ್ಚುವರಿಯಾಗಿ 500 ಮಂದಿ ಸೇರಿ 1500 ಜನರಿಗೆ ಉಚಿತವಾಗಿ ಚಿಕನ್ ಬಿರಿಯಾನಿಯನ್ನು ವಿತರಿಸಿದ್ದೇನೆ ಎಂದು ತ್ರಿಶೂರ್‌ನ ಹೋಟೆಲ್ ಮಾಲೀಕ ಶಿಬು ಹೇಳಿದರು.
ಪಾಲಕ್ಕಾಡ್‌ನ ಒಟ್ಟಪಾಲಂನಲ್ಲಿ ಮೀನು ಮಾರಾಟಗಾರ್ತಿಯಾದ ಸೈದಲವಿ ಅವರು ಅರ್ಜೆಂಟೀನಾದ ವಿಶ್ವಕಪ್ ವಿಜಯೋತ್ಸವವನ್ನು 200 ಕೆಜಿ ಮೀನುಗಳನ್ನು ಉಚಿತವಾಗಿ ನೀಡುವ ಮೂಲಕ ಆಚರಿಸಿದ್ದಾರೆ. ನನಗಿಂದು ತುಂಬಾ ಸಂತೋಷವಾಗಿದೆ. ಅರ್ಜೆಂಟೀನಾದ ಯಶಸ್ಸನ್ನು ಇತರರೂ ಕೂಡ ಆನಂದಿಸಲು ಇದನ್ನು ಮಾಡಿದ್ದೇನೆ ಎನ್ನುತ್ತಾರೆ ಸೈದಲವಿ.
ಮೆಸ್ಸಿ ತಂಡ ಪ್ರಶಸ್ತಿ ಗೆದ್ದಲ್ಲಿ ಶಾಲೆಯಲ್ಲಿ ಎಲ್ಲರಿಗೂ ಚಿಕನ್ ಕಫ್ಸಾವನ್ನು ಪಾರ್ಟಿ ರೂಪದಲ್ಲಿ ಕೊಡುವುದಾಗಿ ಹೇಳಿದ್ದೆ. ನನ್ನಾಸೆಯಂತೆ ನೆಚ್ಚಿನ ತಂಡ ಟ್ರೋಫಿ ಗೆದ್ದಿದೆ. ಶಾಲೆಯ ಎಲ್ಲ ಮಕ್ಕಳು, ಸಿಬ್ಬಂದಿಗೆ ಅರೇಬಿಯನ್ ಖಾದ್ಯವನ್ನು ಪಾರ್ಟಿ ಕೊಡಿಸಿದ್ದೇ ಎಂದು ಶಿಕ್ಷಕ ಮುನೀರ್ ತಿಳಿಸಿದರು.
ಓದಿ: ಪ್ರೇಮಸೌಧ ತಾಜ್ಮಹಲ್ಗೆ ತೆರಿಗೆ ಪಾವತಿಸಲು ನೋಟಿಸ್.. ಶತಮಾನದಲ್ಲೇ ಇದೇ ಮೊದಲ ಸಲ ಜಾರಿ