ನವದೆಹಲಿ: ಅಗತ್ಯವಿದ್ದರೆ ಭಾರತಕ್ಕೆ ಹೆಚ್ಚುವರಿ ರಫೇಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲು ತಮ್ಮ ದೇಶ ಸಿದ್ಧವಿದೆ ಎಂದು ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಹೇಳಿದ್ದಾರೆ.
ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಅಧ್ಯಕ್ಷ ಮತ್ತು ಫ್ರಾನ್ಸ್‌ನ ಭಾರತದ ಮಾಜಿ ರಾಯಭಾರಿ ಡಾ.ಮೋಹನ್ ಕುಮಾರ್ ಅವರೊಂದಿಗೆ ಸಂವಾದದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಮೇಕ್ - ಇನ್ ಇಂಡಿಯಾ ಹಲವಾರು ವರ್ಷಗಳಿಂದ ಫ್ರೆಂಚ್ ಉದ್ಯಮಕ್ಕೆ ವಿಶೇಷವಾಗಿ ಜಲಾಂತರ್ಗಾಮಿ ನೌಕೆಗಳಂತಹ ರಕ್ಷಣಾ ಸಾಧನಗಳಿಗೆ ಒಂದು ವೇದಿಕೆಯಾಗಿದೆ. 2ನೇಯದಾಗಿ ಭಾರತ ಮತ್ತು ಫ್ರಾನ್ಸ್ ಎರಡೂ ಅಂತಾರಾಷ್ಟ್ರೀಯ ಭದ್ರತೆ ಕಾಪಾಡುವಲ್ಲಿ ತೊಡಗಿಕೊಂಡಿವೆ ಎಂದರು.
ಯುಎನ್ ಶಾಂತಿ ಪಾಲನಾ ಕಾರ್ಯಾಚರಣೆಗೆ ಭಾರತ ಅತಿದೊಡ್ಡ ಕೊಡುಗೆ ನೀಡುವ ದೇಶಗಳಲ್ಲಿ ಒಂದಾಗಿದೆ ಮತ್ತು ಫ್ರಾನ್ಸ್ ಪ್ರಪಂಚದ ಅನೇಕ ಭಾಗಗಳಲ್ಲಿ ಅಂತಾರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಭಾರತ ಮತ್ತು ಫ್ರಾನ್ಸ್ ನಡುವಿನ 3ನೇ ವಾರ್ಷಿಕ ರಕ್ಷಣಾ ಸಂವಾದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಅವರೊಂದಿಗೆ ಇಂದು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರ ಅಧಿಕೃತ ಭೇಟಿ ಸಮಯದಲ್ಲಿ, ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರ, ವಿಶೇಷವಾಗಿ ಇಂಡೋ-ಪೆಸಿಫಿಕ್‌ನಲ್ಲಿ ಸಮುದ್ರ ಭದ್ರತೆ ವಿಚಾರ ಒಳಗೊಂಡಿರುತ್ತದೆ ಎನ್ನಲಾಗಿದೆ.
36 ರಫೇಲ್ ಯುದ್ಧ ವಿಮಾನಗಳ ಒಪ್ಪಂದಕ್ಕೆ ಸಹಿ ಹಾಕಿದ್ದ ಭಾರತ:
ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ, 33 ರಫೇಲ್ ಯುದ್ಧ ವಿಮಾನಗಳನ್ನು ಸಮಯಕ್ಕೆ ಸರಿಯಾಗಿ ಭಾರತಕ್ಕೆ ಸರಬರಾಜು ಮಾಡಲಾಗಿದೆ ಎಂದು ಫ್ರೆಂಚ್ ರಾಯಭಾರ ಕಚೇರಿ ತಿಳಿಸಿದೆ.
ಭಾರತ 2016ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ನೊಂದಿಗೆ 36 ರಫೇಲ್ ಯುದ್ಧ ವಿಮಾನಗಳಿಗಾಗಿ ಸುಮಾರು 59 ಸಾವಿರ ಕೋಟಿ ರೂ.ಗಳಿಗೆ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿತ್ತು.
ಈ ಕುರಿತಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಪಾರ್ಲೆ, ಭಾರತೀಯ ವಾಯುಪಡೆಯು ರಫೇಲ್ ವಿಮಾನದಿಂದ ತೃಪ್ತವಾಗಿದೆ ಎಂಬುದು ತಮ್ಮ ಪಾಲಿಗೆ ಸಂತೋಷದ ಸಂಗತಿ ಮತ್ತು ಕೋವಿಡ್ -19 ಸಾಂಕ್ರಾಮಿಕದ ಹೊರತಾಗಿಯೂ, ನಾವು ಒಪ್ಪಂದದ ಅಡಿ 36 ವಿಮಾನಗಳನ್ನು ಸಮಯಕ್ಕೆ ತಲುಪಿಸಿದ್ದೇವೆ ಎಂದು ಹೇಳಲು ಹೆಮ್ಮೆಪಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಇಂದಿನಿಂದ 10 ದಿನಗಳವರೆಗೆ ಉತ್ತರ ಕೊರಿಯಾ ಜನರು ನಗುವಂತಿಲ್ಲ.. ವಿಚಿತ್ರ ನಿರ್ಬಂಧಕ್ಕೆ ಕಾರಣ ಗೊತ್ತಾ?