ವಡೋದರಾ, ಗುಜರಾತ್ : ವಡೋದರಾ ಜಿಲ್ಲೆಯ ಶಿನೋರ್ ತಾಲೂಕಿನ ದಿವಾರ್ ಗ್ರಾಮದ ಬಳಿಯ ನರ್ಮದಾ ನದಿ ಬಳಿಗೆ ಆರು ಜನ ಯುವಕರ ಗುಂಪು ತೆರಳಿತ್ತು. ಇದರಲ್ಲಿ ನಾಲ್ವರು ಯುವಕರು ಸ್ನಾನಕ್ಕಾಗಿ ನೀರಿಗೆ ಇಳಿದಿದ್ದರು. ಅದರಲ್ಲಿ ಒಬ್ಬ ಮಾತ್ರ ಈಜಿ ಪಾರಾಗಿದ್ದಾರೆ. ಉಳಿದ ಮೂವರು ನಾಪತ್ತೆಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಈ ವಿಷಯ ತಿಳಿದ ನಂತರ ಸಂಬಂಧಿಕರು ಘಟನಾ ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ್ದಾರೆ. ನಂತರ ಘಟನೆಯ ಬಗ್ಗೆ ಕರಜನ್ ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳೀಯರು ಮತ್ತು ಕುಟುಂಬದವರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ನುರಿತ ಈಜು ತಂಡ ಹಾಗೂ ರಕ್ಷಣಾ ಸಿಬ್ಬಂದಿ ನಾಪತ್ತೆಯಾದವರಿಗಾಗಿ ಹುಟುಕಾಟ ನಡೆಸಿದೆ. ಆದರೆ 15 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದರೂ ಯುವಕರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಘಟನೆ ನಡೆದಿದ್ದು ಹೇಗೆ?; ವಡೋದರಾ ಜಿಲ್ಲೆಯ ಶಿನೋರ್ ತಾಲೂಕಿನಲ್ಲಿ ಈ ದಾರುಣ ಘಟನೆ ನಡೆದಿದೆ. ಇದರಲ್ಲಿ ಪಾದ್ರಾ ತಾಲೂಕಿನ ಭದರ್ವಿ ಗ್ರಾಮದ ಸುಮಾರು ಆರು ಮಂದಿ ಹದಿಹರೆಯದ ಸಹೋದರರು ವ್ಯಾಪಾರ ಮಾಡಲು ಹೋಗಿದ್ದರು. ನಂತರ ಈ ಹದಿಹರೆಯದವರು ದಿವಾರ್ ಬಳಿ ಹಾದುಹೋಗುವ ನರ್ಮದಾ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿದರು. ಆ ಪ್ರಕಾರವಾಗಿ ಆರು ಮಂದಿಯಲ್ಲಿ ನಾಲ್ವರು ನರ್ಮದಾ ನದಿಗೆ ಈಜಲು ತೆರಳಿದ್ದರು. ಈ ವೇಳೆ ಈಜು ಬಾರದ ಇಬ್ಬರು ಗೆಳೆಯರು ಅಲ್ಲಿನ ಪರಿಸರದ ವಿಡಿಯೋ ಗ್ರಫಿಯಲ್ಲಿ ತೊಡಗಿದ್ದರು.
ಕಿಶನ್ ವಾಸವ, ಅಕ್ಷಯ್ ವಾಸವ, ಸೋಹಿಲ್ ವಾಸವ ಮತ್ತು ಅನಿಲ್ ವಾಸವ ನೀರಿಗಿಳಿದ ಗೆಳೆಯರಾಗಿದ್ದಾರೆ. ಇನ್ನು ಸುಭಾಷ್ ಪಟನ್ವಾಡಿಯಾ ಮತ್ತು ವಿಶಾಲ್ ವಾಸವ ನದಿ ದಡದಲ್ಲಿ ನಿಂತು ಛಾಯಾಚಿತ್ರ ತೆಗೆಯುತ್ತಿದ್ದರು. ಈ ವೇಳೆ ಈಜು ಬಲ್ಲ ಯುವಕನೊಬ್ಬ ದಡ ತಲುಪಿದ್ದ. ಆದರೆ ಉಳಿದ ಮೂವರು ನದಿಯಲ್ಲಿ ಈಜಲು ಸಾಧ್ಯವಾಗದೇ ನಾಪತ್ತೆಯಾಗಿದ್ದಾರೆ.
ಈ ವಿಷಯ ತಿಳಿದ ಪೊಲೀರು ಸ್ಥಳಕ್ಕೆ ಭೇಟಿ ನೀಡಿ, ನಾಪತ್ತೆಯಾಗಿರುವ ಯುವಕರಿಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದೇ ವೇಳೆ ಈ ಸಂಬಂಧ ಪ್ರಕರಣವನ್ನೂ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನೊಂದು ಕಡೆ ಸ್ನಾನಕ್ಕೆ ತೆರಳಿದ್ದ ನಾಲ್ವರು ಯುವಕರ ಪೈಕಿ ಇಬ್ಬರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಆ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ : ರಾಜಸ್ಥಾನ: ಬಾವಿಗೆ ಬಿದ್ದು ಮಹಿಳೆ, ಮೂವರು ಮಕ್ಕಳು ಸಾವು