ರಾಜಸ್ಥಾನ: ಬುಂದಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 52 ರ ಹಿಂದೋಳಿ ಪ್ರದೇಶದಲ್ಲಿ ಶನಿವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪುಷ್ಕರ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ ಎಸ್‌ಯುವಿ ವಾಹನವೊಂದು ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಮಧ್ಯಪ್ರದೇಶದ ಅಗರ್ ಜಿಲ್ಲೆಯ ನಿವಾಸಿಗಳು ಎಂದು ತಿಳಿದುಬಂದಿದೆ.
ಹಿಂದೋಳಿ ಸಮೀಪದ ಸಿಂಗಾಡಿ ಮೋರಿ ಬಳಿ ಶನಿವಾರ ರಾತ್ರಿ 12:30ರ ಸುಮಾರಿಗೆ ಅವಘಡ ಸಂಭವಿಸಿದೆ ಎಂದು ಹಿಂದೋಳಿ ಪೊಲೀಸ್ ಠಾಣಾಧಿಕಾರಿ ಮನೋಜ್ ಸಿಂಗ್ ಸಿಕರ್ವಾರ್ ತಿಳಿಸಿದ್ದಾರೆ. ಒಂದೇ ಕುಟುಂಬದ 7 ಮಂದಿ ಪುಷ್ಕರ ದರ್ಶನ ಮುಗಿಸಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ಈ ವೇಳೆ ಕಾರು ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಮಹಿಳೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ದಂಪತಿ ಹಾಗೂ ತಂದೆ ಮತ್ತು ಮಗ ಸೇರಿದ್ದಾರೆ.
ಮಧ್ಯಪ್ರದೇಶದ ಅಗರ್ ಜಿಲ್ಲೆಯ ಕನಾಡ್ ಗಂಗೂ ಖೇಡಿ ಗ್ರಾಮದ ನಿವಾಸಿ ಬಲ್ವಂತ್ ಸಿಂಗ್ ಗುರ್ಜರ್ ಅವರ ಪುತ್ರ ದೇವಿ ಸಿಂಗ್ ಮತ್ತು ಅವರ ಪತ್ನಿ ಮಂಕುನ್ವರ್ ಬಾಯಿ(45), ಸಹೋದರ ರಾಜಾರಾಮ್ ( 40) ಮತ್ತು ರಾಜಾರಾಮ್ ಅವರ ಮಗ ಜಿತೇಂದ್ರ (20) ಮೃತರು. ರಾಜಾರಾಮ್ ಅವರ ಪತ್ನಿ ಸೋರಂ ಬಾಯಿ(38), ದೇವಿ ಸಿಂಗ್ ಅವರ ಮಗ ಈಶ್ವರ್ ಸಿಂಗ್ ( 33) ಮತ್ತು ಈಶ್ವರ್ ಸಿಂಗ್ ಅವರ ಮಗ ಭೈರು ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು ಚಲಾಯಿಸುತ್ತಿದ್ದ ಈಶ್ವರ್ ಸಿಂಗ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಭೈರು ಸಿಂಗ್ ಮತ್ತು ಸೋರಂ ಬಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದ್ದು, ಗಾಯಾಳುಗಳಿಗೆ ಬಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಮೈಸೂರು : ಬಾಲಕಿ ಮೈಮೇಲೆ ಹಾದು ಹೋದ ಶಾಲಾ ಬಸ್ - ಸಿಸಿಟಿವಿಯಲ್ಲಿ ಘಟನೆ ಸೆರೆ
ಮೈಸೂರಲ್ಲಿ ಇತ್ತೀಚೆಗೆ ನಡೆದ ಘಟನೆ: ಇನ್ನು ಕಳೆದ ಎರಡು ದಿನಗಳ ಹಿಂದೆ ಚಾಲಕನ ಅರಿವಿಗೆ ಬಾರದೇ ಬಾಲಕಿ ಮೇಲೆ ಶಾಲಾ ಬಸ್ ಹಾದು ಹೋದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಮಂಜುನಾಥ ನಗರದಲ್ಲಿ ನಡೆದಿತ್ತು. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಹುಣಸೂರು ಪಟ್ಟಣದ ಮಂಜುನಾಥ ನಗರದ ನಿವಾಸಿಯಾಗಿರುವ ಬಾಲಕಿ ಬಸ್ ಇಳಿದು, ವಾಹನದ ಮುಂಭಾಗದಿಂದ ರಸ್ತೆ ದಾಟಿ ಮನೆಗೆ ಹೋಗುತ್ತಿದ್ದಳು. ಇದೇ ಸಂದರ್ಭದಲ್ಲಿ ಬಸ್ ಮುಂದೆ ಚಲಿಸಿದೆ. ಬಾಲಕಿಯನ್ನು ಗಮನಿಸದ ಚಾಲಕ ಬಸ್ ಚಲಾಯಿಸಿದ್ದಾನೆ. ಬಸ್ ಬಾಲಕಿಯ ಮೈಮೇಲೆ ಹಾದು ಹೋಗಿದೆ. ಪೋಷಕರು ಚಾಲಕನ ವಿರುದ್ಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.