ಗುರುಗ್ರಾಮ್ (ಹರಿಯಾಣ): ದೆಹಲಿ-ಜೈಪುರ್ ಹೆದ್ದಾರಿಯ ಗುರುಗ್ರಾಮ್‌ನ ಸಿದ್ರಾವಲಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಕಾರು ಮತ್ತು ಪಿಕಪ್ ವ್ಯಾನ್‌ಗೆ ತೈಲ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಲಾಸ್ಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ ಮಾಹಿತಿ: ಬಿಲಾಸ್ಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ ವಿನೋದ್ ಕುಮಾರ್ ಮಾಹಿತಿ ಪ್ರಕಾರ, ''ಜೈಪುರದಿಂದ ಬರುತ್ತಿದ್ದ ತೈಲ ಟ್ಯಾಂಕರ್ ಡಿವೈಡರ್ಗೆ ಗುದ್ದಿ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರ್ ಒಳಗಿದ್ದ ಪ್ರಯಾಣಿಕರು ಬಹುಶಃ ಜೈಪುರಕ್ಕೆ ಪ್ರಯಾಣಿಸುತ್ತಿದ್ದರು. ಕಾರ್ನಲ್ಲಿದ್ದ ಸಿಎನ್‌ಜಿ ಸಿಲಿಂಡರ್‌ಗಳಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತಗುಲಿದ ಪರಿಣಾಮ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೊದಲು ಕಾರ್ಗೆ ಡಿಕ್ಕಿ ಹೊಡೆದ ಆಯಿಲ್ ಟ್ಯಾಂಕರ್, ನಂತರ ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದು, ವ್ಯಾನ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ'' ಎಂದರು.
"ದೆಹಲಿ- ಜೈಪುರ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ನಮಗೆ ಮಾಹಿತಿ ದೊರೆತ ತಕ್ಷಣವೇ ನಾವು ಸ್ಥಳಕ್ಕೆ ತಲುಪಿದ್ದೇವೆ. ಆರೋಪಿ ತೈಲ ಟ್ಯಾಂಕರ್ ಚಾಲಕ ಪರಾರಿಯಾಗಿದ್ದು, ಆತನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ'' ಎಂದು ಅವರು ಹೇಳಿದ್ದಾರೆ.
ದೆಹಲಿ- ಜೈಪುರ್ ಹೆದ್ದಾರಿಯಲ್ಲಿ ಹೊತ್ತಿದ್ದ ಉರಿದ ಬಸ್, ಇಬ್ಬರು ಸಾವು: ಹರಿಯಾಣದ ಗುರುಗ್ರಾಮದ ದೆಹಲಿ- ಜೈಪುರ್ ಎಕ್ಸ್ಪ್ರೆಸ್ ಹೈವೇಯಲ್ಲಿ ಇತ್ತೀಚೆಗೆ ಬಸ್ ಹೊತ್ತಿ ಉರಿದು ಇಬ್ಬರು ಸಾವನ್ನಪ್ಪಿದ್ದರು. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಸ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದರು. 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದರು.
ಪೊಲೀಸರ ಪ್ರಕಾರ, ಗಾಯಗೊಂಡ ಐವರನ್ನು ಮೇದಾಂತ ಆಸ್ಪತ್ರೆಗೆ ಸೇರಿಸಲಾಗಿತ್ತು. ಉಳಿದವರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೆಹಲಿಯಿಂದ ಜೈಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿರುವ ಝಾರ್ಸಾ ಮೇಲ್ಸೇತುವೆ ಹತ್ತಿರ ರಾತ್ರಿ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು ಎಂದು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.
ಹೆದ್ದಾರಿ ಮಧ್ಯೆ ಬಸ್ ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಯಿಂದಾಗಿ ದೆಹಲಿ ಹಾಗೂ ಜೈಪುರ್ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು.
ಇದನ್ನೂ ಓದಿ: ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋದಲ್ಲಿ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ಜಾರಿ: ಬಿಎಂಆರ್ಸಿಎಲ್