ಜೋಯ್‌ನಗರ (ಪಶ್ಚಿಮ ಬಂಗಾಳ): ಜೋಯ್‌ನಗರದಲ್ಲಿ ನಿನ್ನೆ ರಾತ್ರಿ ನಡೆದ ಜಾತ್ರೋತ್ಸವದಲ್ಲಿ ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ವೃದ್ಧ ಮತ್ತು ಬಾಲಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಮತ್ತು ಸ್ಫೋಟದಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಬಲೂನ್ ಮಾರಾಟಗಾರ ಮುಚಿರಾಮ್ ಹಲ್ದರ್ (62), ಕುಟಿಬುದ್ದೀನ್ ಮಿಸ್ತ್ರಿ (36), ಶಾಹಿನ್ ಮೊಲ್ಲಾ (14) ಮತ್ತು ಅಬೀರ್ ಗಜೀರ್ ಎಂದು ಗುರುತಿಸಲಾಗಿದೆ.
ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟಗೊಂಡ ಮಾಹಿತಿ ತಿಳಿದ ತಕ್ಷಣವೇ ಭಾರೀ ಬಂದೋಬಸ್ತ್ನೊಂದಿಗೆ ಜಯನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅದೇ ವೇಳೆ ಬಕುಲ್ತಾಲಾ ಪೊಲೀಸ್ ಠಾಣೆಯ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಈ ಕಾರ್ಯಕ್ರಮ ನಡೆದ ಸ್ಥಳ ಎರಡೂ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುವ ಕಾರಣ ಎರಡೂ ಠಾಣೆಯ ಪೊಲೀಸರು ರಕ್ಷಣಾ ಕಾರ್ಯಕ್ಕಾಗಿ ಸ್ಥಳದಲ್ಲಿ ಹಾಜರಿದ್ದರು. ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಎಲ್ಲ ವ್ಯವಸ್ಥೆ ಮಾಡಿದರು.
ರಾಜಾಪುರ-ಕಾರಬೇಗ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬಾತ್ರಾ ಗ್ರಾಮದಲ್ಲಿ ಕಳೆದೊಂದು ವಾರದಿಂದ ಜಾತ್ರಾ ಕಾರ್ಯಕ್ರಮದ ಅಂಗವಾಗಿ ಹಲವಾರು ಅಂಗಡಿ ಮುಂಗಟ್ಟುಗಳು, ಸ್ಟಾಲ್ಗಳನ್ನು ಹಾಕಲಾಗಿತ್ತು. ಉಳಿದ ಅಂಗಡಿಗಳಂತೆಯೇ ಬಲೂನ್ ಮಾರಾಟಗಾರನು ಅಲ್ಲಿ ತನ್ನ ಅಂಗಡಿಯನ್ನು ತೆರೆದಿದ್ದ. ಅಂಗಡಿಯಲ್ಲಿ ತನ್ನ ಬಲೂನ್ಗೆ ಬೇಕಾಗಿದ್ದಂತಹ ಗ್ಯಾಸ್ ಸಿಲಿಂಡರ್ ವ್ಯವಸ್ಥೆಯನ್ನೂ ಕೂಡಾ ಮಾಡಿಕೊಂಡಿದ್ದನು. ನಿನ್ನೆ ರಾತ್ರಿ ಸುಮಾರು 9.30 ರ ಸುಮಾರಿಗೆ ಗ್ಯಾಸ್ ಸಿಲಿಂಡರ್ ಒಡೆದು ಭಾರೀ ಸ್ಫೋಟ ಸಂಭವಿಸಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಕಾರಣ ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಕಲ್ಕತ್ತಾದ ಆಸ್ಪತ್ರೆಗೆ ರವಾನಿಸಲಾಗಿದೆ. ಗ್ಯಾಸ್ ಸ್ಫೋಟಗೊಂಡಿರುವ ಸ್ಥಳದಲ್ಲಿ ಹಾಗೂ ಸ್ಫೋಟಕ್ಕೆ ಕಾರಣ ಏನು ಮತ್ತು ಇಡೀ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಪೂರ್ಣ ತನಿಖೆ ಬಳಿಕವೇ ಸ್ಫೋಟಕ್ಕೆ ಕಾರಣ ಏನು ಎಂಬುದು ಗೊತ್ತಾಗಲಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ನಿಖರವಾದ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾತ್ರೆಯ ಆಯೋಜಕರು ಹಾಗೂ ಅಂಗಡಿ ಮಾಲೀಕರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಅಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ಸಂಭವಿಸಿರುವ ಅವಘಡವೋ ಅಥವಾ ಬೇರೆ ಯಾವುದಾದರೂ ಕಾರಣಗಳಿಂದ ದುರ್ಘಟನೆ ಸಂಭವಿಸಿದೆಯಾ ಎಂಬುದನ್ನು ಕಂಡು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರ ಚೇತರಿಸಿಕೊಂಡ ನಂತರ ಅವರನ್ನು ವಿಚಾರಿಸಿ, ಅವರಿಂದ ಹೇಳಿಕೆಗಳನ್ನು ತೆಗೆದುಕೊಳ್ಳಲಾಗುವುದು. ಜಾತ್ರಾ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ನಿಲ್ಲದ ನಕ್ಸಲ್ ಅಟ್ಟಹಾಸ.. ಒಂದೇ ವಾರದಲ್ಲಿ ಮೂವರು ಬಿಜೆಪಿ ಮುಖಂಡರ ಹತ್ಯೆ