ಸಾಗರ್(ಮಧ್ಯಪ್ರದೇಶ): ಜಿಲ್ಲೆಯಲ್ಲಿ 2 ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಹೀಗಿದ್ದರೂ ಗಡಕೋಟ ಬಳಿಯ ರೆಂಗ್ವಾ ಗ್ರಾಮದ ಸುನಾರ್ ನದಿಯಲ್ಲಿ ಮೀನುಗಾರಿಕೆಗೆಂದು ತೆರಳಿ ನಾಲ್ಕು ಮಕ್ಕಳು ಅಪಾಯದಲ್ಲಿ ಸಿಕ್ಕಿಬಿದ್ದಿದ್ದರು. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಕಳೆದ ಎರಡು ದಿನಗಳಿಂದ ರೆಂಗ್ವಾ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ವಿಶೇಷವಾಗಿ ಕೆಸ್ಲಿ ಮತ್ತು ರೆಹ್ಲಿ ಅಭಿವೃದ್ಧಿ ಘಟಕಗಳಲ್ಲಿ ಮಳೆ ಅಬ್ಬರಿಸಿದ ಪರಿಣಾಮ ನದಿ ನೀರಿನ ಮಟ್ಟ ಬೆಳಗ್ಗೆಯಿಂದ ವೇಗವಾಗಿ ಏರುತ್ತಿತ್ತು. ಹೀಗಿದ್ದರೂ ಮಕ್ಕಳು ನೀರಿಗೆ ಇಳಿದಿದ್ದರಿಂದ ಒಮ್ಮೆಲೇ ನದಿ ನೀರಿನ ಮಟ್ಟ ಏರಿಕೆಯಾಗಿ ಪ್ರವಾಹದಲ್ಲಿ ಸಿಲುಕಿಕೊಂಡರು. ಮಾಹಿತಿಯ ಪ್ರಕಾರ, ಮಕ್ಕಳು ಬೆಳಗ್ಗೆ 9 ಗಂಟೆ ಸುಮಾರಿಗೆ ಮೀನುಗಾರಿಕೆಗೆ ತೆರಳಿದ್ದರು ಎನ್ನಲಾಗ್ತಿದೆ.
ಘಟನೆಯ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸ್ ಸಿಬ್ಬಂದಿ ಮತ್ತು ಆಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿ ನಾಲ್ವರು ಮಕ್ಕಳನ್ನು ರಕ್ಷಿಸಿದ್ದಾರೆ. ರೆಹ್ಲಿ ಎಸ್‌ಡಿಎಂ, ಗಡಕೋಟಾ ತಹಶೀಲ್ದಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದರು.