ಧನ್ಬಾಗ್(ಬಿಹಾರ) : ಕಟ್ಟಿಕೊಂಡ ಗಂಡ ಮತ್ತೊಂದು ಮದುವೆ ಮಾಡಿಕೊಂಡಿದ್ದರಿಂದ ಆಕ್ರೋಶಗೊಂಡಿರುವ ಮೊದಲನೇ ಪತ್ನಿ ಮನೆಗೆ ಬೆಂಕಿ ಹಚ್ಚಿದ್ದರಿಂದ ನಾಲ್ವರು ಸಜೀವ ದಹನವಾಗಿರುವ ಘಟನೆ ಬಿಹಾರದ ಧನ್ಬಾಗ್ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ.
ಬಿಹಾರದ ಬಿರಾವುಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಪೌಲ್ ಬಜಾರ್ನಲ್ಲಿ ಈ ಘಟನೆ ನಡೆದಿದೆ. ಪತಿ ಎರಡನೇ ಮದುವೆ ಮಾಡಿಕೊಂಡಿದ್ದರಿಂದ ಇಡೀ ಮನೆಗೆ ಪೆಟ್ರೋಲ್ ಎರಚಿ, ಬೆಂಕಿ ಹಚ್ಚಿದ್ದಾಳೆ. ಪರಿಣಾಮ ನಾಲ್ವರು ಸಜೀವ ದಹನವಾಗಿದ್ದಾರೆ.
ಬೆಂಕಿ ಅವಘಡದಲ್ಲಿ ಮೊದಲ ಪತ್ನಿ ಹಾಗೂ ಅತ್ತೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಪತಿ ಹಾಗೂ ಮತ್ತೋರ್ವ ಪತ್ನಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಕಾರಣ ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೂಡ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ: 'ಅದೃಷ್ಟ ಶೀಘ್ರವೇ ನಿಮ್ಮತ್ತ ತಿರುಗಲಿದೆ': ವಿರಾಟ್ಗೆ ಪಂಜಾಬ್ ತಂಡದ ಶುಭ ಸಂದೇಶ
ಸಜೀವ ದಹನಗೊಂಡವರನ್ನ ಖಾತೂನ್(65), ಮೊದಲನೇ ಪತ್ನಿ ಪರ್ವೀನ್(35), ಪತಿ ಖುರ್ಷಿದ್ ಹಾಗೂ ಎರಡನೇ ಪತ್ನಿ ರೋಶ್ನಿ ಎಂದು ಗುರುತಿಸಲಾಗಿದೆ. ಖುರ್ಷಿದ್ ಕಳೆದ 10 ವರ್ಷಗಳ ಹಿಂದೆ ಪರ್ವೀನ್ ಅವರನ್ನ ಮದುವೆ ಮಾಡಿಕೊಂಡಿದ್ದರು. ಆದರೆ, ಇವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ, ಕಳೆದ ಎರಡು ವರ್ಷಗಳ ಹಿಂದೆ ಪಕ್ಕದ ಹಳ್ಳಿಯ ರೋಶ್ನಿ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದರು.
ಇದಕ್ಕೆ ಮೊದಲನೇ ಪತ್ನಿ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಫಲಿತಾಂಶ ಕೆಟ್ಟದಾಗಿರುತ್ತದೆ ಎಂಬ ಎಚ್ಚರಿಕೆ ಸಹ ನೀಡಿದ್ದರು. ಮದುವೆ ನಂತರ ಅನೇಕ ಸಲ ಜಗಳ ಸಹ ನಡೆದಿತ್ತು. ಇದೀಗ ಮನೆಗೆ ಬೆಂಕಿ ಹಚ್ಚಿದ್ದರಿಂದ ಎಲ್ಲರೂ ಸಾವನ್ನಪ್ಪಿದ್ದಾರೆ.