ಥಾಣೆ: ಶಿವಸೇನಾ ಪಕ್ಷದ ಪರೆಲ್ ಲಾಲ್ಬಾಗ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸೂರ್ಯಕಾಂತ್ ದೇಸಾಯಿ ಡೊಂಬಿವಲಿಯಲ್ಲಿ ಮೃತಪಟ್ಟಿದ್ದಾರೆ. ಬೇರೊಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯ ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭಿಸದೇ ಸೂರ್ಯಕಾಂತ್ ದೇಸಾಯಿ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಮೂಲಗಳ ಪ್ರಕಾರ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಶಾಸಕ ಸೂರ್ಯಕಾಂತ್ ದೇಸಾಯಿ ಅವರನ್ನು ಡೊಂಬಿವಲಿಯಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದ ಕಾರಣ ಅವರನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಆಸ್ಪತ್ರೆಯ ವೈದ್ಯರು ಸೂರ್ಯಕಾಂತ್ರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಬೇರೊಂದು ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಸೂರ್ಯಕಾಂತ್ರನ್ನು ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲೇ ಆಂಬ್ಯುಲೆನ್ಸ್ ಕೆಟ್ಟು ನಿಂತಿದೆ. ಬಳಿಕ ಸೂರ್ಯಕಾಂತ್ ದೇಸಾಯಿ ಅವರ ಕುಟುಂಬಸ್ಥರು ಆಂಬ್ಯುಲೆನ್ಸ್ನ್ನು ತಳ್ಳಲು ಮುಂದಾಗಿದ್ದಾರೆ.
ಸ್ವಲ್ಪದೂರದ ವರೆಗೆ ಆಂಬ್ಯುಲೆನ್ಸ್ನ್ನ ತಳ್ಳಿದರೂ ಇಂಜಿನ್ ಸ್ಟಾರ್ಟ್ ಆಗದೇ ಇದ್ದ ಕಾರಣ ಮಾರ್ಗ ಮಧ್ಯದಲ್ಲೆ ಸೂರ್ಯಕಾಂತ್ ದೇಸಾಯಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಸಾಯಿಪೂಜೆ ಆಂಬ್ಯುಲೆನ್ಸ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಸೂರ್ಯಕಾಂತ್ ದೇಸಾಯಿ ಪುತ್ರ ಹೃಷಿಕೇಶ್ ಹೇಳಿದ್ದಾರೆ.
ಮಾಜಿ ಶಾಸಕ ಸೂರ್ಯಕಾಂತ್ ದೇಸಾಯಿ ಅವರು 1995ರಲ್ಲಿ ಪರೇಲ್-ಲಾಲ್ಬಾಗ್ ವಿಧಾನಸಭಾ ಕ್ಷೇತ್ರದಿಂದ ಶಿವಸೇನಾ ಪಕ್ಷದಿಂದ ಚುನಾವಣೆ ಸ್ಪರ್ಧೆಸಿ ಗೆಲುವನ್ನು ಸಾಧಿಸಿದ್ದರು. ಕಳೆದ 23 ವರ್ಷಗಳಿಂದ ದೇಸಾಯಿ ಡೊಂಬಿವಲಿ ಪಶ್ಚಿಮದ ಭಾಗಶಾಲಾ ಮೈದಾನದ ಬಳಿ ಕಾಶಿಕುಂಜ್ ಸೊಸೈಟಿಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ''ಟೊಟೊ'' ಆಮೆಗೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸಿದ ವೈದ್ಯರು..!